ADVERTISEMENT

ಈಜು: ಇದು ಎಲ್ಲ ವಯಸ್ಸಿನವರ ಮಜಾ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:44 IST
Last Updated 21 ಏಪ್ರಿಲ್ 2014, 8:44 IST

ಚಿಕ್ಕಬಳ್ಳಾಪುರ: ಮತ್ತೆ ಬೇಸಿಗೆ ಝಳ ಆರಂಭವಾಗಿದೆ. ನಗರ­ದಲ್ಲೊಂದು ಈಜುಕೊಳ ಇದ್ದಿದ್ದರೆ ಎಂದು ನಿಡುಸುಯ್ಯುತ್ತಿ­ದ್ದವರಿಗೆ ಇದು ಶುಭ ಸುದ್ದಿ.
ಒಂದು ವರ್ಷ ಎಂಟು ತಿಂಗಳ ಬಳಿಕ ಸರ್‌ ಎಂ.ವಿಶ್ವೇಶ್ವ­ರಯ್ಯ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ಬಾಗಿಲು ತೆರೆದಿದೆ. ಗುತ್ತಿಗೆದಾರರಿಲ್ಲದೆ, ಸರಿಯಾದ ವ್ಯವಸ್ಥೆಯಿಲ್ಲದೆ ಮುಚ್ಚಿದ್ದ ಈಜುಕೊಳ ಹಾಗೂ ಸುತ್ತಮುತ್ತ ಈಗ ಮತ್ತೆ ಜೀವ ಕಳೆ ಗೋಚರಿಸುತ್ತಿದೆ.

ಹಸಿರಿನಿಂದ ಪಾಚಿಗಟ್ಟಿದ್ದ ನೀರು ಕೊಚ್ಚಿ ಹೋಗಿ ಶುದ್ಧ ನೀರಿನಲ್ಲೀಗ ನೀಲಿ ಪ್ರತಿಬಿಂಬ. ಭಣಗುಡುತ್ತಿದ್ದ ಈಜುಕೊಳ­ದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಪುಟಾಣಿ ಮಕ್ಕಳ ಕಲರವ, ವಿದ್ಯಾರ್ಥಿಗಳ ತುಂಟತನ, ಯುವಜನರ ಮೋಜು, ಈಜುಪಟು­ಗಳ ಮಾರ್ಗದರ್ಶನ ಎಲ್ಲವೂ ಕಾಣಬಹುದು.

ಸ್ಥಳೀಯರು, ಸುತ್ತಮುತ್ತಲವರ ಪಾಲಿಗೇನೋ ಈಜು­ಕೊಳ ಪುನರಾರಂಭ ಆಗಿರುವುದು ರೀತಿ ಸಂಭ್ರಮವಾದರೆ, ಈಜುಕೊಳದ ಗುತ್ತಿಗೆ ಪಡೆದ ಸಂಸ್ಥೆಯವರಿಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವುದು ಸವಾಲಾಗಿ ಮಾರ್ಪಟ್ಟಿದೆ.

ಸುರಕ್ಷಾ ಕ್ರಮ: ಸಂತೋಷದ ವಿಷಯ ಏನೆಂದರೆ, ಮಕ್ಕಳು ಮತ್ತು ಹಿರಿಯರು ಏಕಕಾಲಕ್ಕೆ ಈಜಾಡಲು ಮತ್ತು ತರಬೇತಿ ಪಡೆಯಲು ಇಲ್ಲಿ ಅವಕಾಶವಿದೆ. ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಯಾವುದೇ ವೇಳೆ ಮುಂಗಡ ಶುಲ್ಕ ಪಾವತಿಸುವ ಮೂಲಕ ಈಜಾಡಬಹುದು. ಒಂದ ವೇಳೆ ಈಜುವಾಗ ತೊಂದರೆಯಾದಲ್ಲಿ, ಸ್ಥಳದಲ್ಲೇ ಇರುವ ರಕ್ಷಕರು ತಕ್ಷಣ ಕಾರ್ಯಾಚರಣೆಗೆ ಇಳಿಯುತ್ತಾರೆ. ಜತೆಜತೆಗೆ ಸುರಕ್ಷತಾ ಕ್ರಮ ಸಹ ತೆಗೆದುಕೊಳ್ಳಲಾಗಿದೆ.

ನೀರಿನ ಕೊರತೆ ಮತ್ತು ಇನ್ನಿತರ ಅವ್ಯವಸ್ಥೆಗಳಿಂದಾಗಿ 2012ರ ಆಗಸ್ಟ್ 14ರಂದು ಮುಚ್ಚಲಾದ ಈಜುಕೊಳ ಮತ್ತೆ ಆರಂಭವಾಗುತ್ತದೆ ಎಂಬ ನಂಬಿಕೆಯನ್ನೇ ನಗರದ ನಿವಾಸಿಗಳು ಕೈಬಿಟ್ಟಿದ್ದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಟೆಂಡರ್‌ ಕರೆದರೂ ಗುತ್ತಿಗೆದಾರರು ಬರದೆ ಈಜುಕೊಳ ಪುನರಾರಂಭಗೊಳ್ಳುವ ಲಕ್ಷಣ ಇರಲಿಲ್ಲ.

ಸಮಸ್ಯೆ ನಿವಾರಣೆಯಾಗಿದೆ: ಈ ಮಧ್ಯೆ ಬೆಂಗಳೂರಿನ ಸ್ವಿಮ್‌ಲೈಫ್‌ ಎಂಬ ಸಂಸ್ಥೆ ಈಜುಕೊಳದ ಉಸ್ತುವಾರಿ ವಹಿಸಿ­ಕೊಂಡಿದ್ದು, ನೀರು ಮತ್ತು ಇನ್ನಿತರ ಸಮಸ್ಯೆಗಳನ್ನು ನಿವಾರಿಸಿಕೊಂಡಿದೆ. ನೀರಿನ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ ತಾತ್ಕಾಲಿಕವಾಗಿ ಈಜುಕೊಳಕ್ಕೆ ಜೀವ ತುಂಬುವ ಪ್ರಯತ್ನ ನಡೆದಿದೆ. ಜನರಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಈಜುಕೊಳವನ್ನು ಮತ್ತೆ ಸುಸ್ಥಿತಿಗೆ ತರಲು ಸಾಕುಸಾಕಾಯಿತು. ಒಳ ಮತ್ತು ಹೊರಾವರಣದಲ್ಲಿ ಎಲ್ಲಿ ಬೇಕೆಂದಲ್ಲಿ ಟೈಲ್ಸ್‌ ಒಡೆದಿದ್ದವು. ನೀರು ಪಾಚಿಗಟ್ಟಿತ್ತು. ಈಗ ಎಲ್ಲ ಶುದ್ಧಗೊಳಿಸಿ, ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿ ಪೂರ್ಣಗೊಳಿಸಿ ವಾರದಿಂದ ಈಚೆಗೆ ಈಜುಕೊಳ ಪುನರಾರಂಭಿಸಿದ್ದೇವೆ’ ಎಂದು ಈಜುಕೊಳದ ವ್ಯವಸ್ಥಾಪಕ ನವಾಜ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

15 ಟ್ಯಾಂಕರ್ ನೀರು: ‘ಏನೇ ಅವ್ಯವಸ್ಥೆ ಸರಿಪಡಿಸಿದರೂ ನೀರಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈಜುಕೊಳದ ಬಳಿ­ಯಿರುವ ಕೊಳವೆಬಾವಿ ಬತ್ತಿರುವ ಕಾರಣ ಪ್ರತಿ ದಿನ ಟ್ಯಾಂಕರ್‌­ಗಳಿಂದ ನೀರು ತರಿಸುತ್ತಿದ್ದೇವೆ. ಮೊದಲ ದಿನ ಇಡೀ ಕೊಳ ತುಂಬಿಸಲು ನೂರಕ್ಕೂ ಹೆಚ್ಚು ಬಾರಿ ಟ್ಯಾಂಕರ್‌­ನಿಂದ ನೀರು ತರಿಸಿಕೊಂಡೆವು. ಈಗ 10ರಿಂದ 15 ಟ್ಯಾಂಕರ್‌ ನೀರು ಈಜುಕೊಳಕ್ಕೆ ಪೂರೈಸುತ್ತೇವೆ’ ಎಂದು ಅವರು ತಿಳಿಸಿದರು.

ಗಲೀಜಾಗಿರುವ ನೀರನ್ನು ಪ್ರತಿದಿನವೂ ಹೊರಗೆ ಚೆಲ್ಲಿ ಟ್ಯಾಂಕರ್ ಮೂಲಕ ಹೊಸ ನೀರನ್ನು ಈಜುಕೊಳಕ್ಕೆ ಬಿಡ­ಲಾಗುತ್ತದೆ. ಉಳಿದ ನೀರನ್ನು
ಶುದ್ಧೀಕರಣ ಘಟಕದಿಂದ ಶುದ್ಧಗೊಳಿಸುತ್ತೇವೆ. ಸಾಧ್ಯವಾದಷ್ಟೂ ಇಡೀ ಆವರಣ ಸ್ವಚ್ಛ­ವಾಗಿಡಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.

‘ಈಜುಕೊಳ ಆರಂಭಗೊಂಡಿದ್ದು ಸಂತೋಷ ತಂದಿದೆ. ನನ್ನ ಪುಟ್ಟ ಮಗಳನ್ನು ಇಲ್ಲಿ ಕರೆ ತಂದು ಈಜುವುದನ್ನು ಕಲಿಸುತ್ತೇನೆ. ನನ್ನಂತೆಯೇ ಬೇರೆ ತಂದೆ, ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಕರೆ ತರುತ್ತಾರೆ’ ಎಂದು ನಗರದ ನಿವಾಸಿ ಸಂತೋಷ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.