ADVERTISEMENT

ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 8:52 IST
Last Updated 26 ಜುಲೈ 2017, 8:52 IST

ಚಿಕ್ಕಬಳ್ಳಾಪುರ: ‘ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ತಮ್ಮಲ್ಲಿರುವ ಕೆಟ್ಟ ಬುದ್ದಿಯನ್ನು ತೊಡೆದು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಬೆಳೆಯುತ್ತಾ ಮಕ್ಕಳು ಕೂಡ ಅದನ್ನೇ ಅನುಕರಿಸುತ್ತಾರೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರ ಹೊರವಲಯದ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜ್ಞಾನಾಂಕುರ’ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಮಕ್ಕಳಲ್ಲಿ ಜ್ಞಾನವೆಂಬ ಶಕ್ತಿ ಹೊರ ಹೊಮ್ಮ ಬೇಕಾದರೆ ಪೋಷಕರು ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಮಕ್ಕಳು ಬರೀ ಶಾಲೆಯಲ್ಲಿ ಕಲಿತರೇ ಸಾಲದು. ಮನೆಯಲ್ಲಿ ಕೂಡ ಕಲಿಯಬೇಕಾದ್ದದ್ದು ಬಹಳಷ್ಟಿದೆ. ಅದಕ್ಕಾಗಿ ಪೋಷಕರು ಮನೆಯಲ್ಲಿ ಉತ್ತಮ ಪರಿಸರ ಸೃಷ್ಟಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಪೋಷಕರು ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ, ಕೇಳಿದ್ದನ್ನೆಲ್ಲಾ ಕೊಡಿಸಬಾರದು. ಅಗತ್ಯವಾದ ವಸ್ತುಗಳನ್ನು ಮಾತ್ರ ಕೊಡಿಸಬೇಕು. ಮರೆಯದೆ ಸದಾ ಅವರಿಗೆ ಮುಗುಳ್ನಗೆಯ ಪ್ರೀತಿ ವ್ಯಕ್ತಪಡಿಸಬೇಕು. ಮನಸ್ಸನ್ನು ಅರ್ಥೈಸಿಕೊಂಡು ಅದಕ್ಕೆ ಅನುಗುಣವಾಗಿ ಕಲಿಕೆಯನ್ನು ಹೇಳಿಕೊಡಬೇಕು. ಉತ್ತಮ ವಾತಾವರಣದಲ್ಲಿ ಬೆಳೆಯುವ ಮಗು ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ’ ಎಂದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್‌.ಶಿವರಾಂ ರೆಡ್ಡಿ ಮಾತನಾಡಿ, ‘ಪೋಷಕರ ಒಡನಾಟದಲ್ಲಿ ಬೆಳೆಯುವ ಮಕ್ಕಳು ಅವರ ಆಲೋಚನೆಗಳನ್ನೇ ಅನುಸರಿಸುತ್ತಾರೆ. ಕಾಲಕ್ರಮೇಣ ಅವರ ಮಾನಸಿಕ ಬುದ್ಧಿ ಕೂಡ ಪೋಷಕರಂತೆ ವಿಕಸನಗೊಳ್ಳುತ್ತದೆ. ಉತ್ತಮ ಸಂಸ್ಕಾರವುಳ್ಳ ಪರಿಸರದಲ್ಲಿ ಬೆಳೆಯುವ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ಹರಳುಗಟ್ಟುತ್ತದೆ’ ಎಂದು ಹೇಳಿದರು.

‘ಮಕ್ಕಳ ಆಸೆಗೆ ಮೀತಿಯೇ ಇಲ್ಲ. ಹಾಗೆಂದು ಅವರು ಕೇಳಿದ್ದೆಲ್ಲ ಕೊಡಿಸುವುದು ಕೂಡ ಒಳ್ಳೆಯದಲ್ಲ. ಮೊಬೈಲ್, ಟಿ.ವಿ, ಸಿನಿಮಾದಂತಹ ಹವ್ಯಾಸಗಳಿಂದ ದೂರವಿಡುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಮಗುವಿಗೆ ಶಿಕ್ಷಕರು ಶಾಲೆಯಲ್ಲಿಯೇ ಎಲ್ಲವನ್ನು ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ಕೂಡ ತಮ್ಮ ಜವಾಬ್ದಾರಿ ಅರಿತು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು. ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಮುಖಂಡರಾದ ಎ.ಟಿ. ಶಿವರಾಂ , ಡಾ. ಕೆ.ಪಿ. ಶ್ರೀನಿವಾಸ್‌ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.