ADVERTISEMENT

ಉದ್ಘಾಟನೆಯಾಗದ ಮಾಂಸ ಮಾರಾಟ ಮಳಿಗೆ

ಎಂ.ರಾಮಕೃಷ್ಣಪ್ಪ
Published 19 ಸೆಪ್ಟೆಂಬರ್ 2017, 7:19 IST
Last Updated 19 ಸೆಪ್ಟೆಂಬರ್ 2017, 7:19 IST

ಚಿಂತಾಮಣಿ: ನಗರಸಭೆಯ ಆದಾಯ ಮೂಲವಾಗಿ, ಪ್ರಮುಖ ವಾಣಿಜ್ಯ ಕಟ್ಟೆಯಾಗಿ ಬೆಳೆಯಬೇಕಿದ್ದ ಇಲ್ಲಿಯ ಮಾಂಸ ಮಾರಾಟ ಮಳಿಗೆ ನಾಲ್ಕು ವರ್ಷವಾದರೂ ಉದ್ಘಾಟನೆಯ ಭಾಗ್ಯ ಪಡೆದಿಲ್ಲ.

ನಗರದಲ್ಲಿ ಒಂದೆಡೆ ಮಾಂಸದ ಮಾರಾಟ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವುದು, ಸ್ವಚ್ಛತೆ ಕಾಪಾಡುವುದರ ಜೊತೆಗೆ ನಗರಸಭೆಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಎಸ್‌.ಎಫ್‌.ಸಿ ಯೋಜನೆಯಡಿ ಸುಮಾರು ₹ 28 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ.

ನಗರಸಭೆಯ ದಕ್ಷ ಆಡಳಿತಾಧಿಕಾರಿ ಡಾ.ರಾಮೇಗೌಡ ಅವರ ಅವಧಿಯಲ್ಲಿ ಮಳಿಗೆಗಳ ಉದ್ಘಾಟನೆ ಮಾಡಲಾಗಿತ್ತು. ನಂತರ ಹರಾಜು ಪ್ರಕ್ರಿಯೆಯೂ ಮುಗಿದಿದೆ. ಆದರೆ ಹರಾಜು ಪಡೆದವರಿಗೆ ಮಳಿಗೆಗಳನ್ನು ಹಸ್ತಾಂತರಿಸಿಲ್ಲ. ಇದರಿಂದಾಗಿ ಮಳಿಗೆಗಳ ಬಾಗಿಲು ತೆರೆಯಲಾಗದೆ ಕಸಕಡ್ಡಿಗಳಿಂದ ತುಂಬಿಕೊಂಡಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ADVERTISEMENT

ಕೋಳಿ, ಮಾಂಸ ಮಾರಾಟದ ತ್ಯಾಜ್ಯಗಳಿಂದ ಸೊಳ್ಳೆ, ನೊಣಗಳ ಸಂಖ್ಯೆ ಹೆಚ್ಚಾಗಿದೆ. ಡೆಂಗಿ, ಚಿಕೂನ್‌ಗುನ್ಯಾ ಮತ್ತಿತರ ಮಾರಕ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಜತೆಗೆ ನಗರದಲ್ಲಿ ಸ್ವಚ್ಛತೆ ಕಾಪಾಡುವುದೂ ಕಷ್ಟವಾಗುತ್ತಿದೆ. ಇದನ್ನು ತಪ್ಪಿಸಿ, ಒಂದೇ ಸೂರಿನಡಿ ಮಾಂಸ ಮಾರಾಟ ಮಾಡಬೇಕು ಎಂಬುದು ವಾಣಿಜ್ಯ ಮಳಿಗೆ ನಿರ್ಮಾಣದ ಮೂಲ ಉದ್ದೇಶವಾಗಿತ್ತು. ಆದರೆ ರಾಜಕೀಯ ಹಿತಾಸಕ್ತಿಗಳು ಅದಕ್ಕೆ ತಡೆಯೊಡ್ಡಿವೆ ಎಂಬುದು ಮೂಲಗಳ ವಿವರಣೆ.

ಮಾಂಸ ಮಾರಾಟದ ವಾಣಿಜ್ಯ ಮಳಿಗೆಗಳು ನಗರದ ಮಧ್ಯಭಾಗದ ಎಂ.ಜಿ.ರಸ್ತೆಗೆ ಹೊಂದಿಕೊಂಡಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಮಾಂಸ ಮಾರಾಟಕ್ಕೆ ಅಗತ್ಯವಾದ ಪೂರಕ ವಾತಾವರಣ ನಿರ್ಮಿಸಿದೆ. ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ನಗರದ 4 ವಿಭಾಗಗಳಲ್ಲಿ ಇದೇ ರೀತಿಯ ಸಂಕೀರ್ಣ ನಿರ್ಮಿಸಿ ರಸ್ತೆಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸುವ ಉದ್ದೇಶವನ್ನೂ ಒಳಗೊಂಡಿತ್ತು.

ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಪ್ರತಿಷ್ಠೆಯಿಂದ, ಇಚ್ಛಾಶಕ್ತಿಯ ಕೊರತೆಯಿಂದ ಸ್ಥಳೀಯ ಸಂಸ್ಥೆ ಪ್ರಮುಖ ಉದ್ದೇಶ ದಾರಿ ತಪ್ಪುತ್ತಿದೆ. ಮಾಂಸ ಮಾರಾಟ ಮಳಿಗೆ ಉತ್ತಮ ಉದಾಹರಣೆಯಾಗಿದೆ. ನಗರಸಭೆ ಸದಸ್ಯರೇ ತಮ್ಮ ಸಂಬಂಧಿಕರ ಹೆಸರಿನಲ್ಲಿ ಹರಾಜು ಕೂಗಿ ಮಳಿಗೆ ಪಡೆದಿದ್ದಾರೆ. ಅವರ ಸ್ವಾರ್ಥಕ್ಕಾಗಿ ಇಡೀ ನಗರದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ವ್ಯಾಪಾರಿಗಳು ಆರೋಪಿಸುವರು.

ನಗರಸಭೆಯು ವಾಣಿಜ್ಯ ಮಳಿಗೆಗೆ ₹ 28 ಲಕ್ಷ ವೆಚ್ಚ ಮಾಡಿದ್ದು, ಇದುವರೆಗೆ ಬಿಡಿಗಾಸು ಆದಾಯ ಬಂದಿಲ್ಲ. ನಗರಸಭೆಯಲ್ಲಿ ಮೂಲಸೌಲಭ್ಯ ಒದಗಿಸಲು ₹ 10 ಸಾವಿರ ವೆಚ್ಚಕ್ಕೂ ಇನ್ನೊಬ್ಬರ ಕೈಚಾಚಬೇಕಾಗಿದೆ. ಗುತ್ತಿಗೆ ನೌಕರರಿಗೆ 5ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಆದಾಯ ಮೂಲವಾಗಿದ್ದ ಮಾಂಸ ಮಾರಾಟ ಮಳಿಗೆ ಆರಂಭಿಸಿದರೆ ಬಾಡಿಗೆ ರೂಪದಲ್ಲಿ ಆರ್ಥಿಕವಾಗಿ ಭದ್ರತೆ ಕಾಣಬಹುದು. ಅಲ್ಲದೆ ಪರಿಸರ ನೈರ್ಮಲ್ಯದ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ಇಲ್ಲಿಯ ನಿವಾಸಿಗಳು ಹೇಳುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.