ADVERTISEMENT

ಉದ್ಯೋಗಕ್ಕಾಗಿ ರೈತರ ವಲಸೆ

ತೀವ್ರ ಬರದಿಂದ ಕಂಗಾಲು, ನಿತ್ಯ ನಗರಗಳತ್ತ ಕೆಲಸಕ್ಕಾಗಿ ದೌಡು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:58 IST
Last Updated 13 ಮಾರ್ಚ್ 2017, 6:58 IST

ಗೌರಿಬಿದನೂರು: ತಾಲ್ಲೂಕಿನಲ್ಲಿ ಬರದ ಪರಿಣಾಮ ತೀವ್ರವಾಗುತ್ತಿತ್ತು ಜನರು ಉದ್ಯೋಗ ಹುಡುಕಿ ದೊಡ್ಡಬಳ್ಳಾಪುರ, ಯಲಹಂಕ, ಬೆಂಗಳೂರಿಗೆ ನಿತ್ಯ ತೆರಳುತ್ತಿದ್ದಾರೆ.

ನಿತ್ಯ ಬೆಳಿಗ್ಗೆ 5.30ಕ್ಕೆ ಬೆಂಗಳೂರಿಗೆ ಹೊರಡುವ ಹಂಪಿ ರೈಲಿನಿಂದ ಈ ಉದ್ಯೋಗಕ್ಕಾಗಿ ತೆರಳುವ ಪರ್ವ ಆರಂಭವಾಗುತ್ತದೆ. ಬೀದರ್, ಉದ್ಯಾನ ಹಾಗೂ ಹಿಂದೂಪುರ ಪ್ಯಾಸೆಂಜರ್ ರೈಲುಗಳ ಮೂಲಕ ನಿತ್ಯ 2ರಿಂದ 3 ಸಾವಿರದ ಜನರು  ಕಾರ್ಖಾನೆಗಳಲ್ಲಿ ದುಡಿಯಲು ತೆರಳುವರು. ಮತ್ತೊಂದು ಕಡೆ ಕೆಲ ಕಾರ್ಖಾನೆಯವರು  ಗ್ರಾಮಗಳಿಗೆ ಮಿನಿ ಬಸ್ ಕಳುಹಿಸುವ ಮೂಲಕ  ಕಾರ್ಮಿಕರನ್ನು ಕರೆದ್ಯೊ ಯುವರು.   ತಾಲ್ಲೂಕಿನಿಂದ ನಿತ್ಯ ಐದಾರು ಸಾವಿರ ಜನರು ಉದ್ಯೋಗ ಹುಡುಕಿ ನಗರಗಳಿಗೆ ಎಡತಾಕುತ್ತಿದ್ದಾರೆ. ಗಾರ್ಮೆಂಟ್‌ಗಳು ಸೇರಿದಂತೆ ನಾನಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೃಷಿ ನಂಬಿ ಬದುಕುತ್ತಿದ್ದ ಬಹುತೇಕ ರೈತರು ಕೃಷಿಯಿಂದ ವಿಮುಖರಾಗಿ ಕೈಗಾರಿಕೆಗಳತ್ತ ಮುಖಮಾಡಿದ್ದಾರೆ. ಮೂರು ದಶಕಗಳ ಹಿಂದೆ ತಾಲ್ಲೂಕಿನಲ್ಲಿ ಸಮೃದ್ಧವಾಗಿ ಮಳೆ ಬಿದ್ದು ತೆರೆದ ಬಾವಿಗಳಲ್ಲಿ ನೀರು ಲಭ್ಯವಿದ್ದ ದಿನಗಳಲ್ಲಿ ಕಬ್ಬು, ಭತ್ತ, ಮೆಣಸಿನಕಾಯಿ, ರೇಷ್ಮೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಳಿಗೆ ಕೃಷಿ ಕೂಲಿ ಕಾರ್ಮಿಕರು ಲಭ್ಯವಿದ್ದರು. ಆದರೆ ಕಾಲಕ್ರಮೇಣ ಎಲ್ಲ ಬದಲಾಗು ತ್ತಿದೆ. ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ. ರೈತರು ಕೃಷಿ ಚಟುವಟಿಕೆಗಳನ್ನು ಬಿಟ್ಟು ಕಾರ್ಖಾನೆಗಳಲ್ಲಿ ಕೆಲಸಕ್ಕೆ ಹೋಗುತ್ತಿ ದ್ದಾರೆ. ಇಂದು ಜಮೀನು ಉಳ್ಳವರು ಇಲ್ಲದವರು ಒಂದೇ ಆಗಿದ್ದಾರೆ. 

‘ರೈತರು  ಜಮೀನುಗಳನ್ನು  ಕೃಷಿ ಯೇತರ ಚಟುವಟಿಕೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತ ಕೃಷಿ ಮರೆಯುವ ವಾತಾವರಣ ನಿರ್ಮಾಣವಾಗಿದೆ. ಹಿಂದೆ  ಬೆಳಿಗ್ಗೆ ಎದ್ದ ತಕ್ಷಣ ಹೊಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಆದರೆ  ಈಗ ಎದ್ದ ತಕ್ಷಣ ಕಾರ್ಖಾನೆ ಕಡೆಗೆ ನಡೆಯುತ್ತಿದ್ದಾನೆ. ರೈತ ಹಾಗೂ ಕೃಷಿ ಉಳಿಯಬೇಕಾದರೆ  ಕೃಷಿ ಕ್ಷೇತ್ರವನ್ನು ಲಾಭದಾಯಕವಾದ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು.  ರೈತರಿಗೆ ನೀರಾವರಿ ಸೌಲಭ್ಯ, ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಹಾಗೂ ರೈತ ಉತ್ಪಾದನೆ ಮಾಡಿದ ಸರಕಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡುವ ಮೂಲಕ ಕೃಷಿಗೆ ಸರ್ಕಾರ ಆದ್ಯತೆ ನೀಡಬೇಕು’ ಎನ್ನುವರು  ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಗೌಡ.

–ಟಿ. ನಂಜುಂಡಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.