ADVERTISEMENT

ಕನ್ನಡ ಕಲಿತಾಗ ಭಾಷೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 10:09 IST
Last Updated 26 ಜುಲೈ 2016, 10:09 IST

ಚಿಂತಾಮಣಿ: ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಭಾಷೆ ಕಲಿತಾಗ ತಾನಾಗಿಯೇ ಕನ್ನಡ ಅಭಿವೃದ್ದಿಯಾಗುತ್ತದೆ ಎಂದು ನಗರದ ಎಸ್‌ಎಫ್‌ಎಸ್‌ ಶಾಲೆಯ ಶಿಕ್ಷಕ  ಸುರೇಶ್‌ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಭಾನುವಾರ ರಾಜೀವನಗರದ ನಗರಸಭೆ ಆರೋಗ್ಯ ನಿರೀಕ್ಷಕ ಸಿ.ಕೆ. ಬಾಬು ಮನೆಯಲ್ಲಿ ಹಮ್ಮಿಕೊಂಡಿದ್ದ ‘ಮನೆಗೊಂದು ಕವಿಗೋಷ್ಠಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ಸರ್ಕಾರಿ ಬಾಲಕರ ಕಾಲೇಜಿನ ಸಹ ಪ್ರಾಧ್ಯಾಪಕ ಪಿ.ಆರ್‌. ನರಸಪ್ಪ ಮಾತನಾಡಿ ದೀಪದಿಂದ ದೀಪ ಹಚ್ಚುವಂತೆ ಕನ್ನಡ ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹಣತೆಯಂತೆ ಬೆಳಗಬೇಕು. ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿ ಪ್ರೋತ್ಸಾಹಿಸಬೇಕು. ಭಾಷೆ ನೀಲಗಿರಿ ಮರವಾಗದೆ ಆಲದ ಮರದಂತೆ ಬೆಳೆಯಬೇಕು ಎಂದು ನುಡಿದರು.

ಚಾಂಪಲ್ಲಿ ಚಂದ್ರಶೇಖರಯ್ಯ, ವೆಂಕ ಟೇಶ್ವರರಾವ್‌, ಅಶ್ವತ್ಥ್‌, ಶ್ರೀಕಾಂತ ಭಟ್‌, ಸೀತಮ್ಮ, ಕಾಂತ, ಕೀರ್ತಿ ಬಸಪ್ಪ ಲಗಳಿ, ಅಶ್ವತ್ಥನಾರಾಯಣ, ರಾಯಲ್‌ ರಮೇಶ್‌, ಕೆಂದನಹಳ್ಳಿ ರಮೇಶ್‌, ಹರೀಶ್‌, ರಾಮಚಂದ್ರಾರೆಡ್ಡಿ, ಎಸ್‌.ಸಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ರಮೇಶ್‌, ರಾಮಕೃಷ್ಣ, ದಿವಾಕರ್‌, ವಿನಾಯಕರೆಡ್ಡಿ ಮತ್ತಿತರರು ಸ್ವರಚಿತ  ವಾಚನ ಮಾಡಿದರು.

ಭ್ರಷ್ಟಾಚಾರ, ತಾಯಿಯ ಮಮತೆ, ಮೋಹ, ವಸತಿ, ದೇವರಿಗೊಂದು ಪ್ರಶ್ನೆ, ಸಂಬಂಧ, ಮುಪ್ಪು, ನೌಕಾಪಡೆ ವಿಮಾನ, ಆತ್ಮಹತ್ಯೆ, ಅಹಂ ಮತ್ತಿತರ ವಿಷಯಗಳ ಕುರಿತ ಕವನಗಳು ನೆರೆದಿದ್ದ ವರ ಗಮನ ಸೆಳೆದವು.

ವೇದಿಕೆಯ ಅಧ್ಯಕ್ಷ ಕಾಗತಿ ವೆಂಕಟ ರತ್ನಂ, ಶಿಕ್ಷಕ ಮುಳ್ಳಹಳ್ಳಿ ನಂಜುಂಡ ಗೌಡ ಮಾತನಾಡಿದರು. ಕಾಗತಿ ಮಂಜು ನಾಥ್‌, ಸೋರಪ್ಪಲ್ಲಿ ಚಂದ್ರಶೇಖರ್‌ ಗೀತೆಗಳನ್ನು ಹಾಡಿ ರಂಜಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೈವಾರ ಶ್ರೀನಿವಾಸ್‌, ಬೆಂಗಳೂರು ರತ್ನ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಚಂದ್ರಶೇಖರ್‌, ಕನ್ನಡ ಕಾರ್ಯಕ್ರಮ ಗಳಿಗೆ  ಸಹಕಾರ ನೀಡುತ್ತಿರುವ ಬಾಬು ದಂಪತಿಯನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.