ADVERTISEMENT

ಕಲಿಕೆ ಮಟ್ಟ ಹೆಚ್ಚಳಕ್ಕೆ ಇ–ಲರ್ನಿಂಗ್ ಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:54 IST
Last Updated 19 ಜುಲೈ 2017, 10:54 IST

ಚಿಕ್ಕಬಳ್ಳಾಪುರ: ನಗರ ಹೊರವಲಯದಲ್ಲಿರುವ ಶ್ರೀಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಮಂಗಳವಾರ ‘ರೋಟರಿ ಚಿಕ್ಕಬಳ್ಳಾಪುರ ಬಿಜಿಎಸ್‌’ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಒಟ್ಟು 32 ಸದಸ್ಯರನ್ನು ಹೊಂದಿರುವ ಕ್ಲಬ್‌ನ ಎರಡನೇ ಅವಧಿಗೆ 25 ಹಾಲಿ ಸದಸ್ಯರ ಜತೆಗೆ ನೂತನವಾಗಿ 7 ಸದಸ್ಯರು ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ರೋಟರಿ ಚಿಕ್ಕಬಳ್ಳಾಪುರ ಬಿಜಿಎಸ್‌ ಕ್ಲಬ್‌ನ ಅಧ್ಯಕ್ಷ ಕೆ.ಎಂ.ರವಿಕುಮಾರ್ ಮಾತನಾಡಿ, ‘ಮಾನವೀಯತೆಗೆ ಸೇವೆ ಸಲ್ಲಿಸಿ ಎನ್ನುವ ಧ್ಯೇಯದಿಂದ ಕೆಲಸ ಮಾಡುವ ರೋಟರಿ ಸಂಸ್ಥೆ ಸಮಾಜಮುಖಿಯಾದ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿದೆ. ನಮ್ಮ ಕ್ಲಬ್‌ ಕಳೆದ ಒಂದು ವರ್ಷದಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಅನೇಕ ಕೆಲಸಗಳನ್ನು ಮಾಡುತ್ತ ಬಂದಿದೆ’ ಎಂದು ಹೇಳಿದರು.

‘ಈ ಬಾರಿ ರೋಟರಿ ಸಂಸ್ಥೆ ಹೊಸ ಬಗೆಯ ಪರಿಕಲ್ಪನೆಯಡಿ ಸಮಾಜ ಕಾರ್ಯ ಮಾಡಲು ಯೋಜನೆ ರೂಪಿಸಿದೆ. ಅದರ ಭಾಗವಾಗಿ ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ‘ಇ–ಲರ್ನಿಂಗ್’ ಯೋಜನೆಯಡಿ ಅಂತರ್ಜಾಲವನ್ನು ಬಳಸಿಕೊಂಡು ಕಲಿಕೆಯನ್ನು ಮತ್ತಷ್ಟು ಚುರುಕುಗೊಳಿಸುವ ಮತ್ತು ಹೊಸ ಬಗೆಯ ಬೋಧನಾ ತಂತ್ರಗಳ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಮೆಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಅಭಿಯಾನಗಳಿಗೆ ಪೂರಕವಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು. ನಗರಸಭೆ ವತಿಯಿಂದ ಆಯೋಜಿಸುವ ‘ಸ್ವಚ್ಛ ಚಿಕ್ಕಬಳ್ಳಾಪುರ’ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಶೀಘ್ರದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3190 ಮಾಜಿ ಗವರ್ನರ್ ಕೆ.ಪಿ.ನಾಗೇಶ್, ‘ಹೊಸದಾಗಿ ಆರಂಭಗೊಳ್ಳುವ ಕ್ಲಬ್‌ಗಳು ಕ್ರಿಯಾಶೀಲವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ಈ ಕ್ಲಬ್‌ ಮೊದಲ ವರ್ಷದಲ್ಲಿಯೇ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

‘ಗ್ರಾಮೀಣ ಭಾಗದ ಕ್ಲಬ್‌ಗಳಿಗೆ ದಾನಿಗಳು ಮತ್ತು ಆರ್ಥಿಕ ಸಂಪನ್ಮೂಲದ ಕೊರತೆ ಇರುತ್ತದೆ. ಸಮಾಜಮುಖಿ ಕೆಲಸಗಳಿಗೆ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಹೇಳಿದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಶಬ್ಧಕೋಶ ವಿತರಿಸಲಾಯಿತು. ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕ್ಲಬ್‌ ಉಪಾಧ್ಯಕ್ಷ ಎಂ.ಎನ್. ಮಂಜುನಾಥ್, ಕಾರ್ಯದರ್ಶಿಗಳಾದ ಸಿದ್ದೇಗೌಡ, ಶ್ರೀನಾಥ್ ಬಾಬು, ಜಂಟಿ ಕಾರ್ಯದರ್ಶಿ ಜಿ. ನಾರಾಯಣ್, ಖಜಾಂಚಿ ಜೆ.ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.