ADVERTISEMENT

ಕಾಮಗಾರಿಗಳಲ್ಲಿ ಅಕ್ರಮ: ಆರೋಪ

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 4:47 IST
Last Updated 25 ಮೇ 2017, 4:47 IST

ಚಿಂತಾಮಣಿ: ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮತ್ತು ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್‌ ಬಣದ  ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಬುಧವಾರ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ಜನರಿಗೆ ಕುಡಿಯುವ ನೀರು ಸರಬರಾಜು  ಮತ್ತು  ಸ್ವಚ್ಛತೆಯಲ್ಲಿ ನಗರಸಭೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿತ್ತು. ಆದರೆ ನಗರಸಭೆಯ ಆಡಳಿತ ಕಳೆದ 4 ವರ್ಷಗಳಿಂದ ಸಂಪೂರ್ಣ ಹಾಳಾಗಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಈಗ ಜಿಲ್ಲೆಯಲ್ಲಿಯೇ ಕೊನೆಯ ಸ್ಥಾನದಲ್ಲಿದೆ ಎಂದು ಆರೋಪಿಸಿದರು.

ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವಿರೋಧ ಪಕ್ಷಗಳ ಸದಸ್ಯರ ವಾರ್ಡ್‌ಗಳಲ್ಲಿ 20ರಿಂದ 25 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ದೂರಿದರು.

ಕೊಳವೆ ಬಾವಿಗಳನ್ನು ಕೊರೆಯುವಲ್ಲಿ ಅಕ್ರಮ ನಡೆಯುತ್ತಿವೆ. 1400ರಿಂದ 1500 ಅಡಿ ಆಳಕ್ಕೆ ಕೊರೆಯಲಾಗಿದೆ ಎಂದು ಬಿಲ್‌ ಮಾಡಲಾಗುತ್ತಿದೆ. 1200 ಅಡಿಗಿಂತ ಕೆಳಗೆ ಮೋಟಾರು ಇಳಿಯುವುದಿಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸದೆ ಮುಖಂಡರ ಇಚ್ಛೆಗೆ ತಕ್ಕಂತೆ ಕೊಳವೆಬಾವಿ ಕೊರೆಸಲಾಗುತ್ತಿದೆ ಎಂದು ಆರೋಪಿಸಿದರು.

ಉಪವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರ್‌ ಎಂ.ಗಂಗಪ್ಪ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಗಮನ ಹರಿಸಲಾಗುವುದು. ಅಗತ್ಯವಿದ್ದರೆ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಇದರಿಂದ ತೃಪ್ತರಾಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಕುಳಿತರು. ‘ಗೌರಿಬಿದನೂರಿನಲ್ಲಿ ಕಾರ್ಯಕ್ರಮ ಇರುವುದರಿಂದ ಜಿಲ್ಲಾಧಿಕಾರಿ ಅಲ್ಲಿ ಮೊಕ್ಕಾಂ ಮಾಡಿದ್ದಾರೆ. ಅವರೇ ನಮ್ಮನ್ನು ಕಳುಹಿಸಿದ್ದಾರೆ’ ಎಂದು ಹೇಳಿ ಉಪ ವಿಭಾಗಾಧಿಕಾರಿ ಮನವೊಲಿಸಿದರು.

ನಗರಸಭೆ ಸದಸ್ಯರಾದ ಶ್ರೀನಾಥ್‌ ಬಾಬು, ಅಲ್ಲಾಬಕಾಶ್‌, ಮಂಜುನಾಥ್‌, ಪಿ.ಶಾಂತಕುಮಾರಿ, ಮಾಜಿ ಸದಸ್ಯರಾದ ರತ್ನಮ್ಮ, ನಾಗರಾಜ್‌, ಮುಖಂಡರಾದ ಮಂಜುನಾಥ ಅಯ್ಯರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.