ADVERTISEMENT

ಕಾಮಗಾರಿಗಾಗಿ ಬೆಳೆ ನಾಶ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:42 IST
Last Updated 12 ಸೆಪ್ಟೆಂಬರ್ 2017, 8:42 IST

ಬಾಗೇಪಲ್ಲಿ: ‘ತಾಲ್ಲೂಕಿನ ಚೇಳೂರು ಹೋಬಳಿಯ ಪುಲಿಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬರವಾರಪಲ್ಲಿ ಗ್ರಾಮದ ಸಮೀಪ ನಿರ್ಮಿಸುತ್ತಿರುವ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ವಿದ್ಯುತ್‌ ಮಾರ್ಗದ ಲೈನ್‌ ಎಳೆಯಲು ಶೇಂಗಾ ಬೆಳೆ ಇದ್ದ ತಮ್ಮ ಜಮೀನಿನಲ್ಲಿ ಜೆಸಿಬಿ ಹರಿಸಿ ಬೆಳೆ ನಾಶ ಮಾಡಲಾಗಿದೆ.

ಇದನ್ನು ಪ್ರಶ್ನಿಸಿದ ಮಹಿಳೆಯರನ್ನು ಅವಾಚ್ಯ ಪದಗಳಿಂದ ನಿಂದಿಸಲಾಗಿದೆ. ಈ ಬಗ್ಗೆ ಚೇಳೂರು ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ’ ಎಂದು ದಬ್ಬರವಾರಪಲ್ಲಿ ರೈತ ಸೋಮಶೇಖರ್ ಆರೋಪಿಸಿದರು.

‘ಸೋಲಾರ್ ಘಟಕಕ್ಕೆ ಲೈನ್‌ ಅಳವಡಿಸುವ ಕಾಮಗಾರಿ ಗುತ್ತಿಗೆ ಪಡೆದ ಸುರೇಶ್‌ ಎಂಬ ಗುತ್ತಿಗೆದಾರನ ಕಡೆಯ ಕಾರ್ಮಿಕರು ನಮ್ಮ ಜಮೀನು ಅತಿಕ್ರಮ ಪ್ರವೇಶ ಮಾಡಿದಾಗ ವೇಳೆ ಪ್ರಶ್ನಿಸಲು ಹೋದ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದೆವು. ಇದೀಗ ಹಠಾತ್‌ ಬೆಳೆ ಹಾಳು ಮಾಡಿರುವುದು ತುಂಬಾ ಬೇಸರ ಉಂಟು ಮಾಡಿದೆ’ ಎಂದು ತಿಳಿಸಿದರು.

ADVERTISEMENT

ಈ ಕುರಿತು ಸುರೇಶ್‌ ಅವರನ್ನು ಪ್ರಶ್ನಿಸಿದರೆ, ‘ರೈತರು ಜೆಸಿಬಿ ಯಂತ್ರ ತಡೆಯಲು ಹೋದಾಗ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಕಾಮಗಾರಿ ನಡೆಸಿದ್ದೇವೆ. ರೈತರಿಗೆ ಬೆಳೆ ನಷ್ಠ ಪರಿಹಾರ ಕೊಡಲು ಒಪ್ಪಂದ ಕೂಡ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಸೋಲಾರ್ ಘಟಕದ ಕಾಮಗಾರಿಗೆ ನಾವು ಅಡ್ಡಿಪಡಿಸುವಂತಿಲ್ಲ. ಒಂದೊಮ್ಮೆ ರೈತರ ಮೇಲೆ ದೌರ್ಜನ್ಯ ನಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇವೆ’ ಎಂದು ಡಿವೈಎಸ್ಪಿ ಪ್ರಭುಶಂಕರ್‌ ತಿಳಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ನೇತೃತ್ವದಲ್ಲಿ ದಬ್ಬರವಾರಪಲ್ಲಿ ಗ್ರಾಮಸ್ಥರು ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.