ADVERTISEMENT

ಕುಡಿಯುವ ನೀರು, ಮೇವಿಗೆ ಆದ್ಯತೆ ನೀಡಿ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:02 IST
Last Updated 16 ಫೆಬ್ರುವರಿ 2017, 11:02 IST
ಚಿಕ್ಕಬಳ್ಳಾಪುರ: ‘ಬರ ಮತ್ತು ಬೇಸಿಗೆ ದಿನಗಳನ್ನು ಸಮರ್ಥವಾಗಿ ಎದುರಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಹೇಳಿದರು. 
 
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ಪಶು ಪಾಲನಾ ಇಲಾಖೆ ಅಧಿಕಾರಿಗಳಿಗೆ ಈ ವಿಚಾರವಾಗಿ ಸೂಚನೆ ನೀಡಿದರು. 
 
‘ಗ್ರಾಮೀಣ ಪ್ರದೇಶಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಕೊಳವೆಬಾವಿಗಳು ಬತ್ತಿದರೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಪೂರೈಸಬೇಕು. ಬೋರ್‌ವೆಲ್‌ಗಳು ಇಲ್ಲದ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
 
ಸಭೆಯಲ್ಲಿ ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ಕವಲೂರು, ‘ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ 73 ಟನ್‌ ಒಣಮೇವು ಸಂಗ್ರಹಿಸಲಾಗಿದೆ. ಪ್ರತಿ ದಿನಕ್ಕೆ ಒಂದು ಹಸುವಿಗೆ 8 ಕೆ.ಜಿಯಂತೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಮೇವು ವಿತರಣೆಗೆ ನಾವು ಸಿದ್ಧರಿದ್ದೇವೆ. ಆದರೆ  ಜಿಲ್ಲಾಧಿಕಾರಿ ಮೇವು ವಿತರಣೆಗೆ ಆದೇಶ ಮಾಡಿಲ್ಲ ಎಂದು ತಹಶೀಲ್ದಾರ್‌ ಹೇಳುತ್ತಿದ್ದಾರೆ. ಹೀಗಾಗಿ ಇನ್ನೂ ಮೇವು ವಿತರಿಸುವ ಕಾರ್ಯ ಆರಂಭಿಸಿಲ್ಲ’ ಎಂದು ತಿಳಿಸಿದರು.
 
ಈ ವೇಳೆ ಮಾತನಾಡಿದ ಅಧ್ಯಕ್ಷರು, ‘ಆದಷ್ಟು ಬೇಗ ಮೇವು ವಿತರಣೆಗೆ ಕ್ರಮಕೈಗೊಳ್ಳಿ. ಮೇವಿನ ಬೀಜ ಪೂರೈಕೆ ಸರಿಯಾಗಿ ನಿರ್ವಹಿಸಿ. ಜನರಲ್ಲಿ ಜಾನುವಾರುಗಳಿಗೆ ತಪ್ಪದೆ ವಿಮೆ ಮಾಡಿಸುವ ಕುರಿತಾಗಿ ಅರಿವು ಮೂಡಿಸುವ ಕೆಲಸ ಮಾಡಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಗಳ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ) ₹ 6.50 ಲಕ್ಷ ಅನುದಾನದಲ್ಲಿ 10 ಫಲಾನುಭವಿಗಳಿಗೆ ಹಸುಗಳನ್ನು ವಿತರಿಸಲು ಕ್ರಮಕೈಗೊಳ್ಳಿ’ ಎಂದು ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. 
 
ಬೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ: ಸಭೆಯಲ್ಲಿ ಕೆಲ ಸದಸ್ಯರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಮಾತನಾಡಿದ ರಾಮಸ್ವಾಮಿ, ‘ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕು. ರೈತರು ರಿಪೇರಿಗಾಗಿ ತರುವ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಿ ಕೊಡಬೇಕು. ನಿರಂತರ ಜ್ಯೋತಿ ಮಾರ್ಗಕ್ಕೆ ಖಾಸಗಿ ಜನರು ಕೊಳವೆಬಾವಿಗಳಿಗೆ ಸಂಪರ್ಕ ಪಡೆಯುವುದಕ್ಕೆ ಕಡಿವಾಣ ಹಾಕಬೇಕು’ ಎಂದು ತಾಕೀತು ಮಾಡಿದರು. 
 
ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಉದ್ದೇಶಿಸಿ, ‘ಜಿಲ್ಲಾ ಆಸ್ಪತ್ರೆ ಸೇರಿದಂತೆ ಪ್ರತಿ ಆರೋಗ್ಯ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಾವು ಮತ್ತು ನಾಯಿ ಕಡಿತದ ಔಷಧಿಗಳು ಸದಾ ಲಭ್ಯ ಇರುವಂತೆ ನೋಡಿಕೊಳ್ಳಬೇಕು. ವೈದ್ಯರಿಗೆ ಕೇಂದ್ರ ಸ್ಥಾನದಲ್ಲಿಯೇ ವಾಸಿಸುವಂತೆ ಸೂಚಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳಿಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು. 
 
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಶೇ84ರಷ್ಟು ಬೆಳೆ ನಷ್ಟವಾಗಿದೆ. ಅದಕ್ಕಾಗಿ ₹ 7.90 ಕೋಟಿ ಒಳಸುರಿ ಸಬ್ಸಿಡಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ತಾಲ್ಲೂಕಿನಲ್ಲಿ ಇನ್ನೂ 6000 ರೈತರು ಬರ ಪರಿಹಾರ ಪಡೆದುಕೊಳ್ಳಲು ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕಿದೆ’ ಎಂದು ತಿಳಿಸಿದರು. 
 
ಈ ವೇಳೆ ಅಧ್ಯಕ್ಷರು ಸೇರಿದಂತೆ ಕೆಲ ಸದಸ್ಯರು ಕೃಷಿ ಇಲಾಖೆ ವತಿಯಿಂದ ಅನುಷ್ಠಾನಕ್ಕೆ ತರುವ ತಾಲ್ಲೂಕು ಪಂಚಾಯಿತಿಗೆ ಸಂಬಂಧಿತ ಯೋಜನೆಗಳ ಕುರಿತು ಸದಸ್ಯರ ಗಮನಕ್ಕೆ ತರುವುದಿಲ್ಲ. ಫಲಾನುಭವಿಗಳ ಆಯ್ಕೆಯ ವಿಚಾರದಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಶಂಕರ್‌, ಉಪಾಧ್ಯಕ್ಷೆ ಇಂದ್ರಮ್ಮ ಅಣ್ಣಯ್ಯಪ್ಪ, ಸದಸ್ಯರಾದ ತಿರುಮಳಪ್ಪ, ಎನ್‌.ಸುಬ್ಬರಾಯಪ್ಪ, ನಾರಾಯಣಪ್ಪ, ಮುತ್ತುರಾಯಪ್ಪ, ಕೆ.ಆರ್.ಸತೀಶ್, ಶಾಲಿನಿ ಹರೀಶ್, ನಾಗಮಣಿ, ನಳಿನಾ ವೆಂಕಟೇಶ್‌, ಲತಾ ಶಿವಕುಮಾರ್, ಧನಲಕ್ಷ್ಮಿ ಮೂರ್ತಿ, ರತ್ನಮ್ಮ, ಎಸ್‌.ಎ.ಮಂಜುಳಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 
 
ಮಾರ್ಚ್‌ ಒಳಗೆ ಅನುದಾನ ಬಳಸಿ
‘ಪ್ರತಿಯೊಬ್ಬ ಸದಸ್ಯರೂ ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ನಡೆದಿರುವ ಕಾಮಗಾರಿಗಳ ಪೈಕಿ ಬಾಕಿ ಉಳಿದಿರುವ ಕಾಮ ಗಾರಿಗಳನ್ನು ಮಾರ್ಚ್‌ ಒಳಗೆ ಪೂರ್ಣಗೊಳಿಸಲು ಮುಂದಾ ಗಬೇಕು. ಇಲ್ಲದಿದ್ದರೆ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗುತ್ತದೆ. ಅನುದಾನ ವಾಪಸ್‌ ಕಳುಹಿಸದೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ರಾಮಸ್ವಾಮಿ ಅವರು ಸಭೆಯಲ್ಲಿ ಹಾಜರಿದ್ದ ಸದಸ್ಯರಿಗೆ ತಿಳಿಸಿದರು.
 
* ಪ್ರತಿ ಇಲಾಖೆಯ ಅನುದಾನ ಮಾರ್ಚ್ ಒಳಗೆ ಸದ್ಭಳಕೆಯಾಗಬೇಕು. ಅನುದಾನ ಬಳಕೆ ಮಾಡಿಕೊಳ್ಳದೆ ವಾಪಸ್‌ ಕಳುಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.
- ಬಿ.ಎಂ.ರಾಮಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.