ADVERTISEMENT

ಕೆಳ ಸೇತುವೆಗಳ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:05 IST
Last Updated 27 ಮೇ 2017, 5:05 IST

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕುಪ್ಪಹಳ್ಳಿ ಬಳಿ ರೈಲ್ವೆ ಮಾರ್ಗದಲ್ಲಿ ನಿರ್ಮಿಸಿರುವ ಕೆಳ ಸೇತುವೆ ಅವೈಜ್ಞಾನಿಕವಾಗಿದ್ದು, ಅದರಿಂದಾಗಿ ಸುತ್ತಮುತ್ತಲ ಗ್ರಾಮಗಳ ನಾಗರಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕೂಡಲೇ ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ  ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ನೇತೃತ್ವದ ನಿಯೋಗ ಶುಕ್ರವಾರ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ಅವರಿಗೆ ಮನವಿ ಸಲ್ಲಿಸಿತು.

‘ಮಳೆಗಾಲದಲ್ಲಿ ಕೆಳ ಸೇತುವೆ ಬಳಿ ನೀರು ಸಂಗ್ರಹವಾಗಿ ಗ್ರಾಮಸ್ಥರು ಸಂಚರಿಸಲು ಆಗದಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಮಳೆ ಸುರಿದರೆ ಸೇತುವೆ ಬಳಿ ನಾಗರಿಕರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಸುತ್ತಮುತ್ತಲಿನ ಗ್ರಾಮಗಳಾದ ಚದಲಪುರ, ಗವಿಗಾನಹಳ್ಳಿ, ಕೊಳವನಹಳ್ಳಿ, ಕೊತ್ತನೂರು, ಅಂಗಟ್ಟ, ನಂದಿ, ಅರಸನಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ಮಾರ್ಗವಾಗಿ ಗೋಪಿನಾಥ ಬೆಟ್ಟ, ನಂದಿ ಗಿರಿಧಾಮ ಮತ್ತು ಕಣಿವೆ ಬಸವಣ್ಣ ದೇವಸ್ಥಾನದಂತಹ ಪ್ರವಾಸಿ ತಾಣಗಳಿಗೆ ನೂರಾರು ಪ್ರವಾಸಿಗರು ಸಂಚರಿಸುತ್ತಾರೆ. ಆದ್ದರಿಂದ ಕೂಡಲೇ ಸೇತುವೆ ಬಳಿ ನೀರು ನಿಂತು ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ನಿಯೋಗದಲ್ಲಿದ್ದವರು ಒತ್ತಾಯಿಸಿದರು.

ADVERTISEMENT

‘ಕುಪ್ಪಹಳ್ಳಿ ಗ್ರಾಮದ ಬಹುತೇಕ ರೈತರು ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನಗಾಡಿ, ದ್ವಿಚಕ್ರ ವಾಹನಗಳ ಮೂಲಕ ಇದೇ ಮಾರ್ಗವಾಗಿ ತಮ್ಮ ಜಮೀನುಗಳಿಗೆ ಸಂಚರಿಸಬೇಕು. ಮಳೆಗಾಲದಲ್ಲಿ ಇಡೀ ದಾರಿ ಅಧ್ವಾನಗೊಳ್ಳುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಪಾದಚಾರಿಗಳ ಸಂಚರಿಸಲು ಕೂಡ ಅಸಾಧ್ಯವಾಗುತ್ತದೆ. ಅಂಗಟ್ಟ ಬಳಿ ನಿರ್ಮಿಸಿರುವ ಕೆಳ ಸೇತುವೆ ಮಾರ್ಗ ಕೂಡ ದುಸ್ಥಿತಿಯಲ್ಲಿದ್ದು, ಅದನ್ನೂ ಸರಿಪಡಿಸಲು ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಕೆ.ಪಿ.ಬಚ್ಚೇಗೌಡ, ‘2013-14ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ-, ಪುಟ್ಟಪರ್ತಿ,- ಧರ್ಮಾವರಂ ಮತ್ತು ಚಿಕ್ಕಬಳ್ಳಾಪುರ-, ಗೌರಿಬಿದನೂರು ರೈಲು ಮಾರ್ಗಗಳು ಘೋಷಣೆಯಾಗಿದ್ದು ಈವರೆಗೆ ಆ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ಈ ಎರಡು ಮಾರ್ಗಗಳ ಕಾಮಗಾರಿ ಆರಂಭಿಸಿ ನಾಗರಿಕರಿಗೆ ಅನಕೂಲ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಆರ್.ಎಸ್.ಸಕ್ಸೇನಾ, ‘ಕುಪ್ಪಹಳ್ಳಿ ಮತ್ತು ಅಂಗಟ್ಟ ಕೆಳಸೇತುವೆ ದುರಸ್ತಿ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಸದ್ಯ ಹೊಸ ರೈಲು ಮಾರ್ಗಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಮೀಕ್ಷೆ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.

ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕ  ಕೆ.ಪಿ.ಚನ್ನಬೈರೇಗೌಡ, ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಕುಪ್ಪಹಳ್ಳಿ ಶ್ರೀನಿವಾಸ್, ಕುಪ್ಪಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್, ಫುಡ್ ನರಸಿಂಹಯ್ಯ, ನರಸಿಂಹಮೂರ್ತಿ, ಮುನಿರಾಜು, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ವೆಂಕಟೇಶ್, ನಂಜಪ್ಪ, ಯಲುವಹಳ್ಳಿ ವೆಂಕಟಪತಿ, ಕೊತ್ತನೂರು ಸತೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.