ADVERTISEMENT

ಕೊನೆಗೂ ರೈತರ ಕೈಹಿಡಿದ ಮುಂಗಾರು

ಎಂ.ರಾಮಕೃಷ್ಣ
Published 5 ಸೆಪ್ಟೆಂಬರ್ 2017, 8:28 IST
Last Updated 5 ಸೆಪ್ಟೆಂಬರ್ 2017, 8:28 IST
ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಬಳಿ ಹೊಲದಲ್ಲಿ ನಳನಳಿಸುತ್ತಿರುವ ರಾಗಿ ಬೆಳೆ
ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಬಳಿ ಹೊಲದಲ್ಲಿ ನಳನಳಿಸುತ್ತಿರುವ ರಾಗಿ ಬೆಳೆ   

ಚಿಂತಾಮಣಿ: ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈನಲ್ಲಿ ಸಂಪೂರ್ಣವಾಗಿ ಕೈಕೊಟ್ಟು ರೈತರಲ್ಲಿ ನಡುಕ ಹುಟ್ಟಿಸಿದ್ದ ಮುಂಗಾರು ಮಳೆ ಆಗಸ್ಟ್ ತಿಂಗಳಿನಲ್ಲಿ ಸತತವಾಗಿ ಸುರಿಯುವ ಮೂಲಕ ಸಂತಸದ ವಾತಾವರಣ ಮೂಡಿಸಿದೆ.

ಸಂಕಷ್ಟದಲ್ಲಿರುವ ರೈತರನ್ನು ಮಳೆರಾಯ ರಕ್ಷಿಸಿದ್ದಾನೆ. ಹೋದ ತಿಂಗಳು ಹದವಾಗಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಜುಲೈ ಮೊದಲ ವಾರದವರೆಗೂ ಶೇ 11ರಷ್ಟಿದ್ದ ಬಿತ್ತನೆ ಪ್ರಮಾಣ ಆಗಸ್ಟ್‌ ಅಂತ್ಯದ ವೇಳೆಗೆ ಶೇ 80ರಷ್ಟು ದಾಟಿದೆ. ಸೆಪ್ಟೆಂಬರ್‌ 10ರ ವರೆಗೂ ರಾಗಿ ನಂತರ ಹುರಳಿ ಬಿತ್ತುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.

ಮುಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ನೆಲಗಡಲೆ ಮತ್ತು ತೊಗರಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡುವುದರಿಂದ ರಾಗಿ ಬಿತ್ತನೆ ಪ್ರಮಾಣ ಗುರಿ ಮೀರಿ ಸಾಧನೆಯಾಗುವ ನಿರೀಕ್ಷೆ ಹೊಂದಲಾಗಿದೆ. ಮೊದಲ ಹಂತದಲ್ಲಿ ಬಿತ್ತನೆ ಮಾಡಲಾಗಿದ್ದ ರಾಗಿ ನಳನಳಿಸುತ್ತಿದೆ. ಬಿತ್ತನೆ ಮಾಡುವುದು, ಕುಂಟಿವೆ ಹಾಕುವುದು ಕಳೆ ಕೀಳುವುದು, ಖಾಲಿ ಜಾಗಗಳ ಪೈರು ನಾಟಿ ಮಾಡುವುದರಲ್ಲಿ ರೈತರು ನಿರತರಾಗಿದ್ದಾರೆ.

ADVERTISEMENT

ಆಗಸ್ಟ್‌ ನಲ್ಲಿ 92.1 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 106.69 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಆಗಸ್ಟ್‌ ವರೆಗೆ 368 ಮಿ.ಮೀ ಮಳೆ ವಾಡಿಕೆ ಇದ್ದು, 386.34 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಮುಂಗಾರಿನಲ್ಲಿ ಒಟ್ಟು 35,918 ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಲಾಗಿತ್ತು.

ಆಗಸ್ಟ್‌ ಕೊನೆಯವರೆಗೆ 28,735 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲೂ ಮಳೆಯಾಗುತ್ತಿದ್ದು, ಬಿತ್ತನೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುವರು.

ತಾಲ್ಲೂಕಿನಲ್ಲಿ ಒಟ್ಟು 1994 ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. 1837 ಕ್ವಿಂಟಲ್‌ ರಿಯಾಯಿತಿ ದರದಲ್ಲಿ ಮಾರಾಟವಾಗಿದೆ. 8836 ಜನ ರೈತರು ಫಲಾನುಭವ ಪಡೆದಿದ್ದಾರೆ. ಸತತ 3 ವರ್ಷಗಳಿಂದ ಬರಗಾಲದಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಮುಂಗಾರು ತಡವಾಗಿಯಾದರೂ ಸುರಿಯುತ್ತಿರುವುದು ರಾಗಿ, ಹುರಳಿ, ಸಿರಿಧಾನ್ಯಗಳು ಕೈಹಿಡಿಯಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಮಳೆಯಾದರೆ ಉತ್ತಮ ಫಸಲು ಪಡೆಯಬಹುದು ಎನ್ನುತ್ತಾರೆ ರೈತರು.

ತಾಲ್ಲೂಕಿನಲ್ಲಿ 16,145 ಹೆಕ್ಟೇರ್‌ ನಲ್ಲಿ ರಾಗಿ ಬಿತ್ತನೆ ಗುರಿ ಇದೆ. ಅದರಲ್ಲಿ 19,929 ಹೆಕ್ಟೇರ್‌ ಬಿತ್ತನೆಯಾಗಿದೆ. ಮುಸುಕಿನ ಜೋಳ 4,299 ಹೆಕ್ಟೇರ್‌ ಬಿತ್ತನೆಯ ಗುರಿ ಇದ್ದು, 3595 ಹೆಕ್ಟೇರ್‌ ನಲ್ಲಿ, ತೊಗರಿ 2,658 ಹೆಕ್ಟೇರ್‌ ನಲ್ಲಿ, 1571 ಹೆಕ್ಟೇರ್‌ ಬಿತ್ತನೆಯಾಗಿದೆ. ನೆಲಗಡಲೆ 9,818 ಹೆಕ್ಟೇರ್‌ ನಲ್ಲಿ 6,308 ಹೆಕ್ಟೇರ್‌, ಅವರೆ 1,200 ಹೆಕ್ಟೇರ್‌ನಲ್ಲಿ 950 ಹೆಕ್ಟೇರ್‌ , ಅಲಸಂದೆ 400 ಹೆಕ್ಟೇರ್‌ಗೆ 382 ಹೆಕ್ಟೇರ್‌ ಬಿತ್ತನೆಯಾಗಿದೆ.

ಮುಂಗಾರು ಆರಂಭದಲ್ಲಿ ವಿಫಲ ವಾಗಿದ್ದರೂ, ಇದೀಗ ಮಳೆಯಿಂದಾಗಿ ಬಾಡುತ್ತಿದ್ದ ನೆಲಗಡಲೆ, ತೊಗರಿ ಹಸಿರು ತುಂಬಿ ನಳನಳಿಸುತ್ತಿವೆ. ಶೇಂಗಾ ಮತ್ತು ತೊಗರಿ ಹೂವಾಗಲು ಅನುಕೂಲವಾಗಲಿದೆ. ಇದೀಗ ಸುರಿದಿರುವ ಮಳೆಗೆ ಮಣ್ಣು ಹಸಿಯಾಗಿದೆ. ಹೀಚು ಕಾಯಿಯಾಗುವ ತನಕ ತೇವಾಂಶವನ್ನು ನೆಲ ಕಾಪಿಟ್ಟುಕೊಳ್ಳಲಿದೆ ಎಂಬುದು ಹಿರಿಯ ರೈತರ ಅಭಿಪ್ರಾಯವಾಗಿದೆ.

ಆದರೆ ಇದುವರೆಗೂ ನೆನೆಮಳೆ ಆಗುತ್ತಿದೆ. ಕೆರೆ ಕುಂಟೆಗಳಿಗೆ ನೀರು ಹರಿದು ಬಂದಿಲ್ಲ. ಬಿರಿಮಳೆಯಾದರೆ ಒಡ್ಡುಗಳಲ್ಲಿ ನೀರು ನಿಲ್ಲಲಿದೆ. ಹಳ್ಳಕೊಳ್ಳಗಳು ತುಂಬಿ, ಕೆರೆ ಕುಂಟೆಗಳಿಗೆ ನೀರು ಬರುತ್ತದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.

ಭವಿಷ್ಯದಲ್ಲಿ ಮಳೆ ಕೈಕೊಟ್ಟರೂ ಕೆರೆಕುಂಟೆ, ಕೃಷಿ ಹೊಂಡಗಳ ನೀರಿನಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಬಿರುಸಾದ ಕೆರೆಕುಂಟೆಗಳಿಗೆ ನೀರು ಬರುವ ಮಳೆ ಅಗತ್ಯವಾಗಿದೆ ಎಂದು ರೈತ ನಾರಾಯಣಪ್ಪ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.