ADVERTISEMENT

ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ದಾರಿಯುದ್ದಕ್ಕೂ ರಥಕ್ಕೆ ದವನ, ಹೂವು, ಬಾಳೆಹಣ್ಣು ಎಸೆದು ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:56 IST
Last Updated 12 ಏಪ್ರಿಲ್ 2017, 4:56 IST
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನೆರವೇರಿತು
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನೆರವೇರಿತು   

ಚಿಕ್ಕಬಳ್ಳಾಪುರ: ನಗರದಲ್ಲಿ ಮಂಗಳವಾರ ನೂರಾರು ಭಕ್ತರ ಹರ್ಷೋದ್ಘಾರದ ನಡುಗೆ ಬಜಾರ್ ರಸ್ತೆಯ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನೆರವೇರಿತು. ರಾಮ ನವಮಿ ಮುಗಿದು ವಾರದ ಬಳಿಕ ಈ ರಥೋತ್ಸವ ಏರ್ಪಡಿಸುವ ಪದ್ಧತಿ ಬಹು ಹಿಂದಿನಿಂದಲೂ ನಡೆದುಬಂದಿದೆ.

ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನೆರೆವೇರಿಸಲಾಯಿತು. ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಥವನ್ನು ಅಲಂಕಾರ ಮಾಡಿ ಅಣಿಗೊಳಿಸಲಾಯಿತು.

ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 1.30ರ ಸುಮಾರಿಗೆ ನೂರಾರು ಭಕ್ತರು ರಥವನ್ನು ಬಜಾರ್ ರಸ್ತೆ, ಗಾಂಧಿ ಕೊಳಾಯಿ ರಸ್ತೆ, ಸುಬ್ಬರಾಯನಪೇಟೆ, ಗರ್ಲ್ಸ್‌ ಸ್ಕೂಲ್‌ ರಸ್ತೆ ಮೂಲಕ ದೇವಸ್ಥಾನದವರೆಗೆ ಎಳೆದರು. ದಾರಿಯುದ್ದಕ್ಕೂ ಭಕ್ತರು ರಥಕ್ಕೆ ದವನ, ಹೂವು, ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡರು.

ಕೇರಳದ ಚಂಡೆವಾದ್ಯ, ತಮಟೆ, ಕೀಲು ಕುದುರೆ, ಗಾರುಡಿ ಗೊಂಬೆ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು  ಮೆರುಗು ನೀಡಿದವು.
ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಕೆಲ ಭಕ್ತರು ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ ವ್ಯವಸ್ಥೆ ಮಾಡಿದ್ದರು.

ಕೋದಂಡರಾಮಸ್ವಾಮಿ ದೇವಾಲಯ ಟ್ರಸ್ಟ್ ರಾಮನವಮಿ ಪ್ರಯುಕ್ತ ದೇವಸ್ಥಾನದಲ್ಲಿ ಮಾರ್ಚ್‌ 28 ರಿಂದ ಏಪ್ರಿಲ್ 5ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.