ADVERTISEMENT

ಕೌತುಕದ ಲೋಕ ಸೃಷ್ಟಿಸಿದ ನಿಪುಣರು!

ಸತ್ಯಸಾಯಿ ಗ್ರಾಮದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಮೇಳಕ್ಕೆ ಚಾಲನೆ, 3 ಸಾವಿರ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 5:23 IST
Last Updated 16 ಜನವರಿ 2017, 5:23 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆರಂಭಗೊಂಡ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳದಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್‌ ಆಟದಲ್ಲಿ ಮೈನವಿರೇಳಿಸಿದ ಪ್ರದರ್ಶನ ನೀಡಿದರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆರಂಭಗೊಂಡ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳದಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್‌ ಆಟದಲ್ಲಿ ಮೈನವಿರೇಳಿಸಿದ ಪ್ರದರ್ಶನ ನೀಡಿದರು   

ಚಿಕ್ಕಬಳ್ಳಾಪುರ: ರಮ್ಯ ಪ್ರಕೃತಿಯ ಮಡಿಲಿನಲ್ಲಿರುವ ಆ ಅಂಗಳದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಎಂದಿಲ್ಲದ ಸಂಭ್ರಮೋಲ್ಲಾಸ ಮನೆ ಮಾಡಿತ್ತು. ಅಲ್ಲಿ ಕ್ರೀಡೆ ಇತ್ತು. ಅದರ ಬೆನ್ನಲ್ಲೇ ಶೌರ್ಯ ತಲೆ ಎತ್ತಿ ನಿಲ್ಲುತ್ತಿತ್ತು. ಸಾಹಸ ಕೌಶಲಗಳಿಗೆ ರೆಕ್ಕೆ ಮೂಡಿತ್ತು.

ಮೈದಾನದ ತುಂಬಾ ಸಂಚರಿಸಿದ ಸಂಚಿತ ಶಕ್ತಿಯ ಸಮರೋತ್ಸಾಹ ಮೈನವಿರೇಳಿಸುತ್ತಿತ್ತು. ಲಯಬದ್ಧ ಹೆಜ್ಜೆಗಳಿಂದ ಹೊರಟ ನಿನಾದ ತಂಗಾಳಿಗೆ ಜೋಗುಳ ಹಾಡಿದಂತಿತ್ತು. ಒಟ್ಟಾರೆ ಅಲ್ಲಿ ಆಟದ ನಿಪುಣರು ಸೃಷಿಸಿದ ಕೌತುಕದ ಹೊಸಲೋಕವೊಂದು ಅನಾವರಣ ಗೊಂಡು ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತ್ತು.

ತಾಲ್ಲೂಕಿನ ಮುದ್ದೇನಹಳ್ಳಿ ಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಲೋಕ ಸೇವಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ  ಭಾನುವಾರದಿಂದ (ಜ.15) ಜನವರಿ 19ರ ವರೆಗೆ ಹಮ್ಮಿಕೊಂಡಿರುವ ೪೩ನೇ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳದ ಮೊದಲ ದಿನ ಕಂಡ ದೃಶ್ಯವಿದು.

ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಯ 12 ಪ್ರೌಢಶಾಲೆಗಳಿಂದ ಬಂದಿದ್ದು 3 ಸಾವಿರ ವಿದ್ಯಾರ್ಥಿಗಳು ವರ್ಣರಂಜಿತ ಶಿಸ್ತಿನ ಪಥಸಂಚಲನ ನಡೆಸಿದರು.

ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಜ್ಯೋತಿಯನ್ನು ‘ಐರಾವತ’ದ ಪ್ರತಿಕೃತಿಯಲ್ಲಿಟ್ಟು ಬೆಟ್ಟದ ತುದಿಗೆ ತಲುಪಿಸಿದ್ದು ನೋಡುಗರನ್ನು ಬೆರಗು ಹುಟ್ಟಿಸಿತು. ಅದರ ಬೆನ್ನಲ್ಲೇ ವಿದ್ಯಾರ್ಥಿಗಳು 90 ಅಡಿಗಳ ಎತ್ತರದಲ್ಲಿ ಪ್ರದರ್ಶಿಸಿದ ಬಿಸಿಗಾಳಿ ಬಲೂನ್ ಕಸರತ್ತು ಮತ್ತು 1 ಸಾವಿರ ಅಡಿ ಎತ್ತರದಲ್ಲಿ ತೋರಿದ ಪ್ಯಾರಾ ಗ್ಲೈಡಿಂಗ್ ಸಾಹಸ ಸಭೀಕರನ್ನು ತಲೆದೂಗುವಂತೆ ಮಾಡಿದವು.

ರೋಲರ್ ಸ್ಕೇಟ್, ಸ್ಕೇಟ್ ಬೋರ್ಡ್, ವೇವ್ ಬೋರ್ಡ್ ಕ್ರೀಡೆಗಳನ್ನು ಪ್ರದರ್ಶಿಸುವ ಮೂಲಕ ಕಿರಿಯ ವಿದ್ಯಾರ್ಥಿಗಳು ಚಪ್ಪಾಳೆ ಗಿಟ್ಟಿಸಿಕೊಂಡರೆ, ಹಿರಿಯ ವಿದ್ಯಾರ್ಥಿಗಳು ತೋರಿದ ಕುದುರೆ ಸವಾರಿ, ಬೈಕ್ ಕಸರತ್ತು, ಮಲ್ಲಕಂಬದಂತಹ ಸಾಹಸ ಕ್ರೀಡೆಗಳು ಮೈದಾನದಲ್ಲಿದ್ದವರನ್ನು ಮೈನವಿರೇಳುವಂತೆ ಮಾಡಿದವು.

ಸಿಂಗಾಪುರ ಮತ್ತು ಮಲೇಷಿಯಾದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಿಂಹ ನೃತ್ಯ, ಕಲಬುರ್ಗಿ ವಿದ್ಯಾರ್ಥಿಗಳಿಂದ ‘ಜಾಂಜ್ ಪಥಕ್’ ಜಾನಪದ ನೃತ್ಯ, ಮಂಡ್ಯದ ವಿದ್ಯಾರ್ಥಿಗಳು ಜರ್ಮನ್ ವ್ಹೀಲ್, ಟ್ರಾಂಪೋಲಿನ್, ಸರ್ವಧರ್ಮ ಸಮನ್ವಯ ತತ್ವವನ್ನು ಪ್ರತಿಬಿಂಬಿಸುವ ಮಾನವ ಪಿರಮಿಡ್ಡುಗಳನ್ನು ಪ್ರದರ್ಶನ, ಜಯಪುರ ಪ್ರೌಢಶಾಲೆಯ ಬಾಲಕರು ವೈವಿಧ್ಯಮಯವಾಗಿ ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ಪ್ರದರ್ಶಿಸಿದರೆ, ಬಾಲಕಿಯರು ‘ಕಾಳಿಂಗ ಮರ್ದನ’ ನೃತ್ಯಾಭಿನಯ ಮಾಡಿ ಸೈ ಎನಿಸಿಕೊಂಡರು.

ಭಾರತೀಯ ಹಾಕಿ ತಂಡದ ಮಾಜಿ ನಾಯಕ ಜೂಡ್ ಫಿಲಿಕ್ಸ್ ಹಾಗೂ ಶೂಟರ್ ರಂಜನ್ ಸೋಧಿ,ಸಂಸದ ಕೆ.ಎಚ್‌.ಮುನಿಯಪ್ಪ, ಸಂಸದ ಸಂಗಣ್ಣ ಕರಡಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ, ಸತ್ಯಸಾಯಿ ಲೋಕ ಸೇವಾ ಸಂಸ್ಥೆಯ ಕಾರ್ಯದರ್ಶಿ ಬಿ.ನಾರಾಯಣರಾವ್, ಮುಖ್ಯ ಮಾರ್ಗದರ್ಶಿ ಬಿ. ಎನ್. ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಸತ್ಯಸಾಯಿ ಗ್ರಾಮದಲ್ಲಿರುವ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ಜ.19ರ ವರೆಗೆ ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ADVERTISEMENT

ಜ.16 ರಂದು ಸತ್ಯಸಾಯಿ ಮಾನವ ಅಭ್ಯುದಯ ಕೇಂದ್ರದ ವಿದ್ಯಾರ್ಥಿಗಳಿಂದ ‘ಸೂಕ್ಷ್ಮ ಸತ್ಯಸಾಯಿ’ ನಾಟಕ, , ಜ.17ರಂದು ಮುದ್ದೇನಹಳ್ಳಿ ವಿದ್ಯಾರ್ಥಿಗಳಿಂದ ಬಡಗುತಿಟ್ಟಿನ ಯಕ್ಷಗಾನ ‘ಅಭಿಮನ್ಯು ಕಾಳಗ’, ಜ.18 ರಂದು ಮುದ್ದೇನಹಳ್ಳಿ 40 ವಿದ್ಯಾರ್ಥಿಗ ಳಿಂದ ವಿದೇಶಿ ವಾದ್ಯಗಳ ವಾದನವುಳ್ಳ ಸಂಗೀತ ಗೋಷ್ಠಿ ನಡೆಯಲಿದೆ.

ಜ.19 ರಂದು ನಡೆಯುವ ಸಮಾರೋಪದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಮತ್ತು ಪಾರಿ ತೋಷಕ ಪ್ರದಾನ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.