ADVERTISEMENT

ಕೌಶಲ ತರಬೇತಿ ಯೋಜನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 13 ಮೇ 2017, 8:42 IST
Last Updated 13 ಮೇ 2017, 8:42 IST

ಚಿಕ್ಕಬಳ್ಳಾಪುರ: ‘ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೇ 15 ರಂದು ಚಾಲನೆ ನೀಡುತ್ತಿರುವ ‘ಕೌಶಲ್ಯ ಕರ್ನಾಟಕ ಮಿಷನ್ ಯೋಜನೆ’ಗೆ ಜಿಲ್ಲೆಯಲ್ಲಿ ಕೂಡ ವ್ಯಾಪಕ ಪ್ರಚಾರ ಕೊಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿ ಜನರನ್ನು ಕೌಶಲ ತರಬೇತಿಗೆ ಹೆಸರು ನೋಂದಾಯಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಕೌಶಲ್ಯ ಕರ್ನಾಟಕ ಮಿಷನ್ ಯೋಜನೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಸಮೀಕ್ಷೆಯ ಆಧಾರದ ಮೇಲೆ ರಾಜ್ಯದಲ್ಲಿ 5 ಲಕ್ಷ ಮಂದಿ ನಿರುದ್ಯೋಗಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಕೌಶಲ ತರಬೇತಿ ಕಾರ್ಯಕ್ರಮದ ಜಾಲತಾಣಕ್ಕೆ ಜಿಲ್ಲೆಯಲ್ಲಿ ಮೇ 15 ರಂದು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಈ ಕುರಿತು 15 –35 ವಯೋಮಾನದ ಪ್ರತಿಯೊಬ್ಬರಿಗೂ ಮಾಹಿತಿ ದೊರೆಯುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಪ್ರತಿ ಹಳ್ಳಿಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಪ್ರತಿಯೊಬ್ಬ ಅಧಿಕಾರಿಯೂ ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಆರ್ಥಿಕ ಗುಣಮಟ್ಟ ಸುಧಾರಣೆಗೆ ಪ್ರತಿಯೊಬ್ಬರಿಗೂ ಉದ್ಯೋಗ ಅತ್ಯಗತ್ಯವಾಗಿದೆ. ಉದ್ಯೋಗ ಇಲ್ಲದವರಿಗೆ ಸೂಕ್ತ ಕೌಶಲ ತರಬೇತಿ ನೀಡಿದರೆ ನಿರುದ್ಯೋಗ ಸಮಸ್ಯೆ ನಿವಾರಿಸಬಹುದಾಗಿದೆ. ಆದ್ದರಿಂದ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಒಂದು ವಾರವಂತೂ ಹೆಚ್ಚಿನ ಪ್ರಮಾಣದಲ್ಲಿ ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದರು. 

‘ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕೂಡ ನೋಂದಣಿ ಪ್ರಕ್ರಿಯೆ ನಡೆಸಬೇಕು. ಕಾಲೇಜು ವಿದ್ಯಾರ್ಥಿಗಳನ್ನು ಈ ಕೆಲಸಕ್ಕಾಗಿ ಸ್ವಯಂ ಸೇವಕರನ್ನಾಗಿ ನೇಮಕ ಮಾಡಿಕೊಂಡು ಅವರ ಊರಿನಲ್ಲಿರುವ ನಿರುದ್ಯೋಗಿಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿಸುವಂತೆ ಮನವೊಲಿಸಬೇಕು. ಅಧಿಕಾರಿಗಳು ಸಂಘ ಸಂಸ್ಥೆಗಳ ನೆರವು ಪಡೆದು ಹೆಚ್ಚಿನ ಸಂಖ್ಯೆಯ ಯುವ ಜನರಿಗೆ ಇದರ ಬಗ್ಗೆ ಮಾಹಿತಿ ತಲುಪಿಸಬೇಕು’ ಎಂದು ಹೇಳಿದರು.

‘ಈ ಯೋಜನೆಯಡಿ ಒಟ್ಟು 16 ಬಗೆಯ ತರಬೇತಿಗಳನ್ನು ನೀಡಲಾಗುತ್ತಿದೆ. ಆ ಪೈಕಿ ಒಬ್ಬ ವ್ಯಕ್ತಿ 5 ತರಬೇತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸೈಬರ್‌ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಹೆಸರು ನೋಂದಣಿ ಮಾಡಬಹುದು. ಸ್ಮಾರ್ಟ್‌ ಫೋನ್‌ಗಳಲ್ಲಿ ಆ್ಯಪ್‌ ಅಳವಡಿಸಿಕೊಂಡು ಅದರ ಮೂಲಕವೂ ನೋಂದಣಿ ಮಾಡಿಕೊಳ್ಳ ಬಹುದಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಸಂಪನ್ಮೂಲವಿದೆ. ಜೊತೆಗೆ ಪದವೀಧರರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಅವರಿಗೆ ಅಗತ್ಯ ಕೌಶಲ ತರಬೇತಿ ದೊರೆಯದ ಕಾರಣ ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ’  ಎಂದು ಅವರು ವಿವರಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಮಂಜುನಾಥ್‌, ಉಪ ವಿಭಾಗಾಧಿಕಾರಿ ಶಿವಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.