ADVERTISEMENT

ಕ್ರೀಡಾಕೂಟದಲ್ಲಿ ನಲಿದಾಡಿದ ಅಂಗವಿಕಲರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:45 IST
Last Updated 27 ನವೆಂಬರ್ 2014, 10:45 IST

ಚಿಕ್ಕಬಳ್ಳಾಪುರ: ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ನಗರದಲ್ಲಿ ಬುಧವಾರ ಅಂಗವಿಕಲರು ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ವತಿಯಿಂದ ಅಂಗವಿಕಲರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿ­ಗಳು ಮತ್ತು ಸಾರ್ವಜನಿಕರು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಿಡ್ಲಘಟ್ಟದ ಆಶಾಕಿರಣ ಅಂಧಮಕ್ಕಳ ಶಾಲೆ ಮತ್ತು ಕೈವಾರದ ಸ್ಪಂದನಾ ಬುದ್ಧಿಮಾಂದ್ಯ ವಿಶೇಷ ಮಕ್ಕಳ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅಂಗವೈಕಲ್ಯದ ಪ್ರಮಾಣ ಆಧರಿಸಿದ ವಿವಿಧ ವರ್ಗದವರಿಗೆ 50 ಮೀಟರ್ ಗಾಲಿಕುರ್ಚಿ, 100 ಮೀಟರ್ ಕಂಕಳಗುಚ್ಚು ಓಟ, 50 ಮೀಟರ್‌ ಒಂದು ಕಾಲಿನ ಓಟ, ಕ್ಯಾಲಿಪಾರ್ಸ್‌ ಓಟ, 100 ಮೀಟರ್‌ ಓಟ, 10 ಮೀಟರ್ ಕಪ್ಪೆ ಜಿಗಿತ, 25 ಮೀಟರ್‌ ಓಟ, 50 ಮೀಟರ್‌ ಓಟ ಮತ್ತು ಗುಂಡು ಎಸೆತ ಸ್ಪರ್ಧೆ ನಡೆಯಿತು.

ಬುದ್ಧಿಮಾಂದ್ಯರಿಗೆ ಕಪ್ಪೆ ಜಿಗಿತ ಸ್ಪರ್ಧೆ, ಹಾಡು, ಚಿತ್ರಕಲೆ, ನೃತ್ಯ, ವೇಷಭೂಷಣ ಮತ್ತು ಸಾಮೂಹಿಕ ನೃತ್ಯ ಸ್ಪರ್ಧೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಿ.೩ರಂದು ನಡೆಯು ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯ­ಕ್ರಮದಲ್ಲಿ ಬಹುಮಾನ ವಿತರಿಸ­ಲಾಗು­ವುದು ಎಂದು ಅಧಿಕಾರಿಗಳು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮರಾಜ್‌­ಅರಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿಡಿಪಿಐ ಟಿ.ಅಶ್ವತ್ಥರೆಡ್ಡಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಉಪ­ನಿರ್ದೇಶಕ ಶಾಂತರಸ, ಅಧಿಕಾರಿ ಮಜ­ಸೀಮ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಎಸ್‌.ಸಿ.­ಪದ್ಮರಾಜು, ದೈಹಿಕ ಶಿಕ್ಷಣ ಇಲಾಖೆಯ ಅಧೀಕ್ಷಕ ಮುನಿ­ಶಾಮಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಸಿ.­ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.