ADVERTISEMENT

ಚುನಾವಣೆಗೆ ಹೋಗಲು ಹಣವಿಲ್ಲ

ಅಲೆಮಾರಿಗಳ ನೋವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 5:50 IST
Last Updated 15 ಏಪ್ರಿಲ್ 2014, 5:50 IST

ಚಿಕ್ಕಬಳ್ಳಾಪುರ: ‘ಮತದಾನಕ್ಕೆ ಬೇಕಾದ ವೋಟರ್‌ ಐಡಿ , ಆಧಾರ್‌, ರೇಷನ್‌ ಕಾರ್ಡ್‌ ಎಲ್ಲವೂ ಇವೆ. ಆದರೆ ಊರಿಗೆ ಹೋಗಿ ಮತ ಹಾಕಿ ಬರುವಷ್ಟು ಆರ್ಥಿಕ ಶಕ್ತಿ ನಮ್ಮಲ್ಲಿ ಈಗಿಲ್ಲ’ ಎನ್ನುತ್ತಾರೆ ಮಹಾರಾಷ್ಟ್ರದ ಅಲೆಮಾರಿಗಳು.

ಹಗಲಿರುಳು ದುಡಿದು ಸಿಗುವ ಹಣವು ನಮ್ಮ ಹೊಟ್ಟೆಗೆ ಸಾಕಾ­ಗುತ್ತದೆ. ಆದರೆ ದೂರದ ಊರಿಗೆ ಹೋಗಿ ಬರಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಜೋಗಿಂದರ್‌ ಗುಲಾಬ್‌ಸಿಂಗ್ ಸಿಸೋಡಿಯಾ ದಂಪತಿ.

ಏ.17ಕ್ಕೆ ಅಲ್ಲೂ ಚುನಾವಣೆಯಿದೆ. ಮತ ಚಲಾಯಿಸಬೇಕೆಂಬ ಪ್ರಜ್ಞೆ ಇದೆ. ಹೋಗಲು ಆಗದು ಎನ್ನುವುದು ಸಾಂಗ್ಲಿ  ಕ್ಷೇತ್ರ ವ್ಯಾಪ್ತಿಯ ಮೀರಜ್ ನಿವಾಸಿಗಳ ನೋವು.

ಹುಟ್ಟಿದ್ದು ಹರಿಯಾಣ, ಇದ್ದದ್ದು ಮೀರಜ್‌: ‘ನನ್ನ ಹುಟ್ಟೂರು ಪಂಜಾಬ್‌ ಸಮೀಪದ ಹರಿಯಾಣ. ಹಲ ವರ್ಷಗಳಿಂದ ಅಲೆಮಾರಿ­ಯಾಗಿಯೇ ಬದುಕುತ್ತಿದ್ದೇನೆ. ದೀರ್ಘ ಕಾಲ ಮಹಾರಾಷ್ಟ್ರದ ಮೀರಜ್‌­ನಲ್ಲಿದ್ದ ಕಾರಣ ಅಲ್ಲಿಯೇ ಆಧಾರ್‌ ಕಾರ್ಡು, ಎಪಿಕ್ ಗುರುತಿನ ಚೀಟಿ  ಸಿಕ್ಕಿತು. ಅವು ಕೈಯಲ್ಲಿದ್ದರೂ ಈಗ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದೆ ಎಂದು ಜೋಗಿಂದರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಇಲ್ಲಿ 30 ರಿಂದ 40 ಮಂದಿ ಅಲೆಮಾರಿಗಳಿದ್ದೇವೆ. ಆದರೆ ಬೆಂಗಳೂರಿನ ಯಲಹಂಕ ಸುತ್ತಮುತ್ತ ಭೇಟಿ ನೀಡಿದರೆ, ನೂರಾರು ಸಂಖ್ಯೆಯಲ್ಲಿ ಅಲೆಮಾರಿಗಳು ಸಿಗುತ್ತಾರೆ. ಸಣ್ಣಪುಟ್ಟ ಕೂಲಿಗೆಲಸ ಮಾಡಿಕೊಂಡು ಮತ್ತು ಔಷಧೀಯ ಗಿಡಮೂಲಿಕೆಗಳನ್ನು ಮಾರಾಟ ಮಾಡಿಕೊಂಡು ಬದುಕುತ್ತಿದ್ದಾರೆ. ಎಲ್ಲರಿಗೂ ಮೀರಜ್‌ ಜನರ ಜೊತೆ ನಂಟು ಇದೆಯಾದರೂ ಚುನಾವಣೆ­ಯಲ್ಲಿ ಮತ ಚಲಾಯಿಸಲು ಸಾಧ್ಯ­ವಾಗದ ಬಗ್ಗೆ ನೋವಿದೆ’ ಎಂದರು.

ವಾಹನ, ಟೆಂಟ್‌ಗಳೇ ನಮಗೆ ಆಸರೆ: ‘ಚಿಕ್ಕಬಳ್ಳಾಪುರದಲ್ಲಿ ಮಾತನಾಡುವ ಕನ್ನಡ, ತೆಲುಗು ನಮಗೆ ಬರುವುದಿಲ್ಲ. ಆದರೆ ಇಲ್ಲಿ ನಡೆಯುವ ದೊಡ್ಡ ರಾಜಕೀಯ ಸಮಾವೇಶಗಳನ್ನು, ರಾಜಕೀಯ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ನೋಡಿದರೆ, ನಮ್ಮೂರು ನೆನಪಾಗುತ್ತದೆ. ಇಲ್ಲಿನ ಭಾಷೆ ಮತ್ತು ಸಂಸ್ಕೃತಿ ಸುಲಭವಾಗಿ ಅರ್ಥವಾಗದಿದ್ದರೂ ಆಸಕ್ತಿಯಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಟೆಂಟ್‌ಗಳಲ್ಲಿ ವಿದ್ಯುತ್‌, ನೀರಿನ ಸೌಲಭ್ಯವಿಲ್ಲ. ಐದು ವಾಹನಗಳಿವೆ. ರಾತ್ರಿಯಾದರೆ, ವಾಹನಗಳಲ್ಲಿನ ಯುಪಿಎಸ್ ಬಳಸುತ್ತಿದ್ದೇವೆ, ಗಿಡಮೂಲಿಕೆ ಔಷಧಿಗಳು ಮಾರಾಟ­ವಾದರೆ ಕೈಗೆ ಹಣ ಬರುತ್ತೆ. ಮಾರಾಟ­ವಾಗದಿದ್ದರೆ, ಎಲ್ಲವೂ ಖಾಲಿ ಖಾಲಿ. ಸಂಸಾರ ನಿಭಾಯಿ­ಸುವುದೇ ಕಷ್ಟ ’ ಎಂದು ತಿಳಿಸಿದರು.

‘ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಊರುಗಳ ಅಲೆಮಾರಿಗಳು ಬೇರೆ ಬೇರೆ ಕಡೆ ನೆಲೆಸಿದ್ದು, ಅವರಿಗೆ ಮತ ಚಲಾವಣೆಯೇ ಕಷ್ಟವಾಗುತ್ತಿದೆ. ಇದಕ್ಕೆ ಚುನಾವಣೆ ಆಯೋಗ ಪರ್ಯಾಯ ವ್ಯವಸ್ಥೆ ರೂಪಿಸಬೇಕು’ ಎಂದು ಶಿಕ್ಷಕ ಅಶ್ವತ್ಥಪ್ಪ ತಿಳಿಸಿದರು.

ಕೇರಳದಲ್ಲಿ ಏ.10ರಂದು ನಡೆದ ಚುನಾವಣೆಯಲ್ಲಿ  ಪಾಲ್ಗೊಳ್ಳಲು ದೂರದ ದುಬೈನಿಂದ ಕೇರಳದ ನಿವಾಸಿಗಳು ಬಂದಿದ್ದರು. ಇಂಥ ಒಂದು ವ್ಯವಸ್ಥೆಯನ್ನು  ಕೇರಳದ ಮುಸ್ಲಿಂ ಸಾಂಸ್ಕೃತಿಕ ಸಂಘವು ಕಲ್ಪಿಸಿತ್ತು. ಆದರೆ ಇಂಥ ಸೌಕರ್ಯ ದೇಶದ ವಿವಿಧೆಡೆ ವಾಸಿಸುವ ಅಲೆಮಾರಿಗಳಿಗೆ ಏಕೆ ಸಿಗುವುದಿಲ್ಲ ಎಂದು ಪ್ರಶ್ನೆ ಹಾಕಿ ಹೊರಟರು ಶಿಕ್ಷಕ ಅಶ್ವತ್ಥಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.