ADVERTISEMENT

ಡೋಂಗಿ ಮಾತುಗಳಿಂದ ಗೆಲ್ಲಲು ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2016, 11:04 IST
Last Updated 3 ಅಕ್ಟೋಬರ್ 2016, 11:04 IST

ಚಿಕ್ಕಬಳ್ಳಾಪುರ: ‘ಸಮಾಜ ಒಡೆಯುವುದೇ ಕಾಯಕ ಮಾಡಿಕೊಂಡಿರುವ ಬಿಜೆಪಿಯವರಷ್ಟು ಕಡು ಭ್ರಷ್ಟರಾಗಿ ಎಲ್ಲಾ ರಾಜಕಾರಣಿಗಳು ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ. ಡೋಂಗಿ ಮಾತುಗಳಿಂದ ಜನರು ಅವರು ಜನರ ಮನ ಗೆಲ್ಲಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗೌರಿಬಿದನೂರು ತಾಲ್ಲೂಕಿನ ವಿಧುರಾಶ್ವತ್ಥದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವತಿಯಿಂದ ಮಹಾತ್ಮಾ ಗಾಂಧಿ ಜಯಂತಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಗ್ರಾಮ್‌ ಸ್ವರಾಜ್‌’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಗ್ರಾಮ ಸ್ವರಾಜ್ಯಕ್ಕಾಗಿ ಕೆಲಸ ಮಾಡಿರೋದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿಯವರಿಗೆ ಪಂಚಾಯತ್ ರಾಜ್ ಅಂದ್ರೆ ಗೊತ್ತಿಲ್ಲ. ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಮಹಿಳೆಯರ ವಿರೋಧಿಗಳಾದವರು ದಲಿತರು ಮತ್ತು ಹಿಂದುಳಿದವರ ಹಿಂದುಳಿದ ಮತಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಮೋದಿ ಅವರು ಮನ್ ಕೀ ಬಾತ್ ಎಂದು ಜನರಿಗೆ ಸುಳ್ಳು ಹೇಳಿಕೊಂಡೆ ಕಾಲ ಕಳೆಯುತ್ತಿದ್ದರೆ. ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಬಾಂಡ್‌, ಸೈಕಲ್‌ ಕೊಟ್ಟಿದ್ದನೇ ಹೇಳುತ್ತಲೇ ಕಾಲ ಕಳೆದು ಜೈಲಿಗೆ ಹೋದರು. ಮೋದಿ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಸಹಕಾರ ದೊರೆಯುತ್ತಿಲ್ಲ’ ಎಂದರು.

‘ಮುಂಬರುವ ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಕಾಲೋನಿಗಳಿಗೆ ಸಿಮೆಂಟ್‌ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹85 ಸಾವಿರ ಕೋಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕಾವೇರಿ ವಿವಾದಕ್ಕೆ 125 ವರ್ಷಗಳ ಇತಿಹಾಸವಿದೆ. ಕಾವೇರಿ ವಿಚಾರದಲ್ಲಿ ನಮಗೆ ಪದೇ ಪದೇ  ಅನ್ಯಾಯವಾಗುತ್ತಿದೆ. ಜನರ ಮತ್ತು ರಾಜ್ಯದ ಹಿತದೃಷ್ಟಿಯಿಂದ ನಾವು ತಮಿಳುನಾಡಿಗೆ ನೀರು ಬಿಡದಿರಲು ಸರ್ವಪಕ್ಷಗಳ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ವಿನಾ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿಲ್ಲ’ ಎಂದು ಹೇಳಿದರು.

ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,‘ಕಾಂಗ್ರೆಸ್‌ ಸರ್ಕಾರ ಮಾಡಿರುವ ಯೋಜನೆಗಳನ್ನು ಬಿಜೆಪಿಯವರು ಹುಸಿ ಮಾಡುತ್ತ ಹೊರಟಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ರೈಲು ಬೋಗಿ ತಯಾರಿಕಾ ಕಾರ್ಖಾನೆ ಸ್ಥಾಪಿಸುವ ಯೋಜನೆಗೆ ಕೇಂದ್ರ ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಆದರೆ ಗುಜರಾತ್‌ನಲ್ಲಿ ಆ ರೀತಿ ಕೊಡುತ್ತಿದ್ದಾರಾ? ಗುಜರಾತ್‌ನಲ್ಲಿ ಗಾಂಧಿ ಮತ್ತು ಮೋದಿ ಇಬ್ಬರೂ ಹುಟ್ಟಿದ್ದಾರೆ. ಆದರೆ ಇವರ ನಡುವೆ ಬಹಳ ವ್ಯತ್ಯಾಸವಿದೆ. ಗಾಂಧಿ ಅಹಿಂಸೆಯ ಮಾರ್ಗದಲ್ಲಿ ನಡೆದು ಎಲ್ಲರಿಗೂ ಪ್ರೇರಣೆಯಾದರು. ಮೋದಿಯಲ್ಲಿ ಸರ್ವಾಧಿಕಾರಿಯಾಗಿ ಮತ್ತೊಬ್ಬರನ್ನು ಧಮನಿಸುವ ಬುದ್ದಿ ಇದೆ’ ಎಂದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಅಶ್ವತ್ಥ ವೃಕ್ಷದಂತೆ ಎಲ್ಲರಿಗೂ ನೆರಳು ನೀಡುತ್ತದೆ. ದೇಶದಲ್ಲಿ ಶಾಂತಿ, ಸಹಿಷ್ಣುತೆ ನೆಲೆಸಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಬೇಕು. ಶೇ 38 ರಷ್ಟು ಮತ ಪಡೆದ ಮೋದಿ ಸರ್ಕಾರ ಅಹಂಕಾರದಿಂದ ವರ್ತಿಸುತ್ತಿದೆ. ಈ ಹಿಂದೆ ಕೂಡ  ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಮ್ಮ ಯೋಧರು ಪಾಕಿಸ್ತಾನದ ಉಗ್ರಗಾಮಿಗಳನ್ನು ಮಟ್ಟ ಹಾಕಿದ್ದರು. ಆದರೆ ಸಿಂಗ್‌ ಅವರು ಮೋದಿಯಂತೆ ಜಂಭ ಕೊಚ್ಚಿಕೊಂಡಿರಲಿಲ್ಲ’ ಎಂದು ಟೀಕಿಸಿದರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುವುದು ಖಚಿತ. 2018ರ ಪ್ರತಿಯೊಬ್ಬರೂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರ ಕೈ ಬಲಪಡಿಸಬೇಕು. ಕಾವೇರಿ ಸೇರಿದಂತೆ ಯಾವುದೇ ವಿಷಯಗಳಲ್ಲಿ ಸಿದ್ದರಾಮಯ್ಯ ಅವರು ಎಚ್ಚರಿಕೆ ವಹಿಸಬೇಕು. ಅವರ ನಾಳಿನ ನಿರ್ಧಾರಗಳು ಕಾಂಗ್ರೆಸ್ ಪಕ್ಷದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರುತ್ತವೆ’ ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್‌ ಮುಖಂಡ ಎಂ.ವಿ.ರಾಜಶೇಖರನ್‌, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸಂಸದರಾದ ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ವಿಧಾನ ಪರಿಷತ್‌ ಸದಸ್ಯರಾದ ವಿ.ಎಸ್. ಉಗ್ರಪ್ಪ, ಮೋಟಮ್ಮ, ಶಾಸಕರಾದ ಎಸ್‌.ಎನ್‌.ಸುಬ್ಬಾರೆಡ್ಡಿ, ಡಾ.ಕೆ.ಸುಧಾಕರ್, ಮುಖಂಡರಾದ ರಾಣಿ ಸತೀಶ್, ಬಿ.ಎಲ್. ಶಂಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಸದಸ್ಯ ಎಚ್.ವಿ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಪ್ಪರೆಡ್ಡಿ, ದೊಡ್ಡಕುರುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಾರೆಡ್ಡಿ, ಪುರಸಭೆ ಅಧ್ಯಕ್ಷ ಕಲೀಂ ಉಲ್ಲಾ,  ಮುಖಂಡರಾದ ಎಚ್.ಎನ್. ಪ್ರಕಾಶ್ ರೆಡ್ಡಿ,ಮರಳೂರು ಹನುಮಂತರೆಡ್ಡಿ, ಕೇಶವರೆಡ್ಡಿ, ರಾಘವೇಂದ್ರ ಹನುಮಾನ್, ಅಶ್ವತ್ಥನಾರಾಯಣಗೌಡ, ಜಿ.ಕೆ.ಸತೀಶ್ ಕುಮಾರ್, ಅಬ್ದುಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.