ADVERTISEMENT

ದ್ರಾಕ್ಷಿ, ಮಾವು ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 4:47 IST
Last Updated 17 ಮೇ 2017, 4:47 IST

ಶಿಡ್ಲಘಟ್ಟ: ಸೋಮವಾರ ಸಂಜೆ ಸುರಿದ ಮಳೆ, ಗಾಳಿಗೆ ತಾಲ್ಲೂಕಿನ ವಿವಿಧೆಡೆ ಬೆಳೆ, ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಲಕ್ಷಗಟ್ಟಲೆ ಹಣ ಹೂಡಿ ನಿರ್ಮಿಸಿದ್ದ ಪಾಲಿಹೌಸ್‌ನ ಪ್ಲಾಸ್ಟಿಕ್ ಹೊದಿಕೆ ಹಾಳಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಜೆ ಬೀಸಿದ ಗಾಳಿಗೆ ಮನೆ, ರೇಷ್ಮೆ ಹುಳು ಮತ್ತು ದನದ ಕೊಟ್ಟಿಗೆಯ ಚಾವಣಿ ಹಾರಿ ಹೋಗಿದೆ. ಮಾವು, ಗೋಡಂಬಿ ಗಿಡಗಳು, ದ್ರಾಕ್ಷಿ ಬಳ್ಳಿಗಳು ನೆಲಕ್ಕುರುಳಿವೆ. ಈಗಾಗಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ಪಾಲಿಗೆ ಬಿರುಗಾಳಿ ಸಮೇತ ಮಳೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬಿರುಗಾಳಿಗೆ ಬಶೆಟ್ಟಹಳ್ಳಿ, ದಿಬ್ಬೂರಹಳ್ಳಿ ಸುತ್ತಲಿನ ಗ್ರಾಮಗಳಲ್ಲಿ ನಿರ್ಮಿಸಿರುವ ಪಾಲಿಹೌಸ್‌ಗಳ ಮೇಲಿನ ಹೊದಿಕೆ ಹಾರಿ ಹೋಗಿವೆ.

ADVERTISEMENT

ಲಘುನಾಯಕನಹಳ್ಳಿಯ ರೈತರಾದ ಶಿವಾರೆಡ್ಡಿ, ಎಲ್.ನಾರಾಯಣಸ್ವಾಮಿ, ದೊಡ್ಡತೇಕಹಳ್ಳಿಯ ಟಿ.ಸಿ. ಚಿಕ್ಕಪ್ಪಯ್ಯ ಅವರ ಪಾಲಿ ಹೌಸ್‌ನ ಪ್ಲಾಸ್ಟಿಕ್ ಹೊದಿಕೆ ಪೂರ್ತಿ ಕಿತ್ತು ಬಿದ್ದಿದೆ. ಇದರಿಂದ ಬೆಳೆದಿದ್ದ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗಿದೆ.

ರೈತರಾದ ಚಿಕ್ಕಪ್ಪಯ್ಯ, ಶಿವಾರೆಡ್ಡಿ ಅವರು ದಪ್ಪ ಮೆಣಸಿನಕಾಯಿಯನ್ನು, ನಾರಾಯಣಸ್ವಾಮಿ ಚೆಂಡು ಹೂ ಬೆಳೆದಿದ್ದಾರೆ. ಈಗಾಗಲೆ ನಾಟಿ ಬಿತ್ತನೆ ಗೊಬ್ಬರ ರಾಸಾಯನಿಕ ಗೊಬ್ಬರಕ್ಕಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ರೈತರು, ಅನಿರೀಕ್ಷಿತ ಗಾಳಿ ಮಳೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಪಾಲಿಹೌಸ್‌ನ ಪ್ಲಾಸ್ಟಿಕ್ ಹೊದಿಕೆಗಳಿಗೆ ವಿಮೆ ಮಾಡಿಸಲಾಗಿದೆ. ಹೀಗಾಗಿ ಕಂಪೆನಿಯವರೇ ಪ್ಲಾಸ್ಟಿಕ್ ಹೊದಿಕೆ ನಿರ್ಮಿಸಿ ಕೊಡುತ್ತಾರೆ. ಆದರೆ ಅದಕ್ಕೆ ಹಲವು ದಿನಗಳ ಸಮಯ ಹಿಡಿಯುತ್ತದೆ. ಅಷ್ಟರಲ್ಲಿ ಬೆಳೆಯು ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ’ ಎಂದು ಶಿವಾರೆಡ್ಡಿ ತಿಳಿಸಿದರು.

ಕಸಬಾ ಹೋಬಳಿಯ ಕೊತ್ತನೂರು ಭಾಗದಲ್ಲಿ ಕೊಯ್ಲು ಹಂತದಲ್ಲಿದ್ದ ಮಾವು, ಮಿಡಿ ಮೂಡುತ್ತಿರುವ ಗೋಡಂಬಿ ನೆಲಕ್ಕುರುಳಿದೆ. ಮಾವಿನ ಕಾಯಿಯ ಸಿಪ್ಪೆ ಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ ಹುಳುಗಳು ಕಾಣಿಸಿಕೊಳ್ಳುತ್ತಿವೆ.

‘ಏಳೆಂಟು ವರ್ಷಗಳಿಂದ ದ್ರಾಕ್ಷಿ ಬೆಲೆ ಪಾತಾಳಕ್ಕೆ ಕುಸಿದಿದೆ. ಸದ್ಯ ದ್ರಾಕ್ಷಿ ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಇನ್ನು ಮಳೆಗೆ ಸಿಲುಕಿದ ಬೆಳೆ ಖರೀದಿಸಲು ಇನ್ನೂ ಹಿಂದೇಟು ಹಾಕುವರು. ಹೀಗಾಗಿ ಬಹುತೇಕ ಬೆಳೆಗಾರರು ನಷ್ಟದಿಂದ ಸಾಲದ ಹೊರೆ ಹೊತ್ತುಕೊಳ್ಳುವುದು ಅನಿವಾರ್ಯ ಆಗಲಿದೆ’ ಎಂದು ರೈತ ನಾರಾಯಣರೆಡ್ಡಿ ಆತಂಕ ವ್ಯಕ್ತಪಡಿಸಿದರು.

ನೀರು ಲಭ್ಯ ಇರುವ ಕೆಲ ರೈತರು ದನಕರುಗಳಿಗೆ ಮೇವನ್ನು ಬೆಳೆದಿದ್ದರು. ಅದೂ ಸಹ ಮಳೆಗೆ ನೆಲಕಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.