ADVERTISEMENT

ನಂದಿನಿ ಉತ್ಪನ್ನಗಳ ಮಾರಾಟ ಉತ್ತೇಜಿಸಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:20 IST
Last Updated 17 ಮೇ 2017, 5:20 IST

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಹೈನುಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾರಾಟಗಾರರು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಕೆ.ವಿ.ನಾಗರಾಜ್ ಹೇಳಿದರು.

ನಗರದಲ್ಲಿರುವ ಒಕ್ಕೂಟದ ಶಿಬಿರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಕುಡಿಯುವ ನೀರಿಗೂ ತಾತ್ವಾರವಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಿತ್ಯ 9.50 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಉತ್ಪಾದನೆ ಮತ್ತು ಮಾರುಕಟ್ಟೆ ಸಮತೋಲನದಲ್ಲಿ ಇದ್ದಾಗ ಮಾತ್ರ ಹೈನುಗಾರರಿಗೆ ನ್ಯಾಯ ಒದಗಿಸಲು ಸಾಧ್ಯ. ಆದ್ದರಿಂದ ಮಾರಾಟಗಾರರು ಖಾಸಗಿ ಹಾಲಿನ ಬ್ರಾಂಡ್‌ಗಳನ್ನು ಪ್ರೋತ್ಸಾಹಿಸದೆ ನಂದಿನಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಬರಗಾಲದಲ್ಲಿ ಕೂಡ ಹೈನುಗಾರಿಕೆಯನ್ನೇ ನಂಬಿ ಬದುಕುವ ಲಕ್ಷಾಂತರ ಕುಟುಂಬಗಳಿವೆ. ಮಾರಾಟಗಾರರು ಉತ್ತಮ ರೀತಿಯಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಿದಾಗ ಮಾತ್ರ ಹೈನುಗಾರರಿಗೆ ನ್ಯಾಯ ಒದಗಿಸಲು ಸಾಧ್ಯ. ನಂದಿನಿ ಹಾಲಿಗೆ ಬೇಡಿಕೆ ಹೆಚ್ಚಿಸಿದರೆ ಸ್ಥಳೀಯ ಹೈನುಗಾರರಿಗೆ ಬದುಕಿಗೆ ನೆರವಾದಂತೆ ಆಗುತ್ತದೆ. ಏಜೆಂಟರ ಏನೇ ಸಮಸ್ಯೆಗಳಿದ್ದರೂ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಬಗೆಹರಿಸಲಾಗುತ್ತದೆ’ ಎಂದರು.

‘ನಗರದಲ್ಲಿರುವ ಮಾರಾಟಗಾರರಿಗೆ ದಿನದ 24 ಗಂಟೆಯೂ ನಂದಿನಿ ಉತ್ಪನ್ನಗಳು ಒದಗಿಸುವ ಉದ್ದೇಶದಿಂದ ಒಕ್ಕೂಟದ ವತಿಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಮಿನಿ ಶೀತಲ ಗೃಹ ತೆರೆಯಲು ಉದ್ದೇಶಿಸಲಾಗಿದೆ. ಇದರಿಂದ ಮಾರಾಟಗಾರರು ಬೇಡಿಕೆಯನ್ನು ಸಕಾಲಕ್ಕೆ ಪೂರೈಸಲು ಅನುಕೂಲವಾಗಲಿದೆ’ ಎಂದು ಹೇಳಿದರು.

ಮಾರಾಟಗಾರರಿಗೆ ಸಭೆಯಲ್ಲಿ ಒಕ್ಕೂಟದ ವತಿಯಿಂದ ಟಿ–ಶರ್ಟ್, ಟೋಪಿ, ಬ್ಯಾಗ್ ವಿತರಿಸಲಾಯಿತು. ಕೋಚಿಮುಲ್ ನಿರ್ದೇಶಕಿ ಸುನಂದಮ್ಮ, ಮಾರುಕಟ್ಟೆ ವ್ಯವಸ್ಥಾಪಕ ಲಕ್ಷ್ಮಿ ಪ್ರಸಾದ್ ಯಾದವ್, ಶಿಬಿರದ ಮುಖ್ಯಸ್ಥ ಪಾಪೇಗೌಡ, ಮಾರುಕಟ್ಟೆ ವಿಭಾಗದ ಹಬೀಬುಲ್ಲಾ, ಪ್ರದೀಪ್, ವಿಸ್ತರಣಾಧಿಕಾರಿಗಳಾದ ಎಸ್‌.ಎನ್.ರಮೇಶ್ ಬಾಬು, ಕೆ.ಸದಾಶಿವ, ಡಿ.ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.