ADVERTISEMENT

ನಗರದಲ್ಲಿ ಆಯುಕ್ತ ವಾಸಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:37 IST
Last Updated 18 ಮೇ 2017, 5:37 IST
ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.   

ಶಿಡ್ಲಘಟ್ಟ: ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ನಿರಾಸಕ್ತಿ ಮತ್ತು ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,  ನಗರಸಭೆ  ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ, ನಗರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಇಲ್ಲಿ ಏನು ನಡೆಯುತ್ತಿದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ ಎಂದು ಹೇಳಿದರು.

‘ನಾನು ನಗರಸಭೆಯ ಉಪಾಧ್ಯಕ್ಷೆಯಾಗಿ ಎಂಟು ತಿಂಗಳಾಯಿತು. ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ ನೀಡುವುದಿಲ್ಲ. ಉಪಾಧ್ಯಕ್ಷರದ್ದು ಏನೂ ನಡೆಯಲ್ಲ ಎಂದು ಉದಾಸೀನ ಮಾಡ್ತಾರೆ, ಅಥವಾ ಹೆಣ್ಣು ಮಗಳು ಅಂತಾ ಉದಾಸೀನ ಮಾಡ್ತಾರೋ ಗೊತ್ತಿಲ್ಲ. ಅಧಿಕಾರಿಗಳು ನಿಮ್ಮ ಮಾತನ್ನೂ ಕೇಳುವುದಿಲ್ಲವೆ ಎಂದು ಆಯುಕ್ತರನ್ನು ಪ್ರಶ್ನಿಸಿದರು.

ADVERTISEMENT

‘ನಗರದ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಾಗ ಅಧಿಕಾರಿಗಳು ಆಯಾ ವಾರ್ಡುಗಳ ಸದಸ್ಯರ ಸಹಕಾರದೊಂದಿಗೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ಸದಸ್ಯರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಅಫ್ಸರ್‌ ಪಾಷಾ, ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಜನರಿಗೆ ತೊಂದರೆ ನೀಡುವುದೇ ತಮ್ಮ ಉದ್ಯೋಗ ಎಂಬಂತೆ ಭಾವಿಸಿದ್ದಾರೆ. ನಗರದಲ್ಲಿ ಏನು ನಡೆಯುತ್ತಿದೆ ಎಂಬುದೇ ನಿಮಗೆ ಗೊತ್ತಿಲ್ಲ. ಇನ್ನೇನು ಕೆಲಸ ಮಾಡುತ್ತೀರಿ’ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ನಗರಸಭಾ ಸದಸ್ಯ ರಾಘವೇಂದ್ರ, ‘ನಗರಸಭೆಯಲ್ಲಿ ಆಯುಕ್ತರು ಇಲ್ಲದಿದ್ದರೆ 11 ಗಂಟೆಗೆ ಕಚೇರಿಗೆ ಬೀಗ ಹಾಕಲಾಗುತ್ತಿದೆ. ವಾಸ್ತವವಾಗಿ ಆಯುಕ್ತರು ನಿಯಮದ ಪ್ರಕಾರ ನಗರದಲ್ಲಿಯೇ ವಾಸಿಸಬೇಕು. ಆದರೆ ಕೇಂದ್ರ ಸ್ಥಾನದಲ್ಲಿ ಯಾವೊಬ್ಬ ಅಧಿಕಾರಿಯೂ ಇರಲ್ಲ. ಸಮಸ್ಯೆಯನ್ನು ಯಾರಿಗೆ ಹೇಳಿ ಪರಿಹರಿಸಿಕೊಳ್ಳಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಸ್ವಚ್ಚ ಭಾರತ ಯೋಜನೆಯಡಿ ಟಪಾಲಿಗೆ ಕೊಡುವ ಯಾವ ಅರ್ಜಿಗಳು ಸಿಗುತ್ತಿಲ್ಲ. 3 ವರ್ಷವಾದರೂ ವಿಲೇವಾರಿ ಆಗುತ್ತಿಲ್ಲ. ಯಾರು ಯಾವಾಗ ಬೇಕಾದರೂ ಕಡತ ಪರಿಶೀಲಿಸಬಹುದಾದ ಅವಕಾಶವನ್ನು ಅಧಿಕಾರಿಗಳು ಒದಗಿಸಿದ್ದಾರೆ’ ಎಂದು ಅವರು ಆರೋಪಿಸಿದರು.

‘ಆರು ತಿಂಗಳಾದರೂ ಪೌರ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ, ಅವರಿಗೆ ಸಂಬಳ ಕೊಡುವವರೆಗೆ ಅಧಿಕಾರಿಗಳು ವೇತನ ಪಡೆಯಬೇಡಿ. ಬಿಲ್ ಪಾವತಿ ಮಾಡಿಕೊಳ್ಳಬೇಡಿ’ ಎಂದು ರಾಘವೇಂದ್ರ ಹೇಳಿದರು. ಇದಕ್ಕೆ ಧ್ವನಿಗೂಡಿಸಿ ಸದಸ್ಯ ವೆಂಕಟಸ್ವಾಮಿ, ಕಾರ್ಮಿಕರಿಗೆ ಸಂಬಳ ಕೊಡಲಿಕ್ಕೆ ಸಾಧ್ಯವಾಗದಿದ್ದರೆ, ನಗರಸಭೆ ಬಾಗಿಲು ಹಾಕಿ, ಕಾರ್ಮಿಕರಿಗೆ ಕೊಡುವ ಉಪಾಹಾರದ ಗುಣಮಟ್ಟ ಸರಿಯಾಗಿಲ್ಲ’ ಎಂದು ದೂರಿದರು.

‘ಖಾತೆ ತೆರೆಯುವ ವಿಚಾರವನ್ನು ಯಾವ ಸದಸ್ಯರ ಗಮನಕ್ಕೂ ತಂದಿಲ್ಲ. ಮುಂದೆ ವಾರ್ಡಿನಲ್ಲಿ ಖಾತೆ ಬದಲಾವಣೆ ಮಾಡುವಾಗ ಸಂಬಂಧಪಟ್ಟ ಸದಸ್ಯರ ಗಮನಕ್ಕೆ ತರಬೇಕು‘ ಎಂದು ಸೂಚಿಸಿದರು.

ಸದಸ್ಯ ಜೆ.ಎಂ.ಬಾಲಕೃಷ್ಣ ಮಾತನಾಡಿ, ನಗರದಲ್ಲಿ ನೀರು ಸರಬರಾಜು ಮಾಡುವ 17 ಸಹಾಯಕರ ಹೆಸರು ಟೆಂಡರ್‌ನಲ್ಲಿ ಸೇರಿಲ್ಲ, ಅವರಿಗೆ ಗುತ್ತಿಗೆದಾರರು ಸಂಬಳ ಕೊಡುತ್ತಿಲ್ಲ. ಅವರ ಸಮಸ್ಯೆ ಪರಿಹರಿಸುವಂತೆ ಆಯುಕ್ತರಿಗೆ ತಿಳಿಸಿದರು.

‘ಆಟೋಗಳಲ್ಲಿ ಕಸ ಸಂಗ್ರಹಣೆಗೆ ಬರುವ ಕಾರ್ಮಿಕರು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಸದಸ್ಯ ಇಲಿಯಾಜ್‌ ಬೇಗ್ ಆರೋಪಿಸಿದರು.

ಸದಸ್ಯ ಲಕ್ಷ್ಮಯ್ಯ, ಶಾಸಕ ಎಂ.ರಾಜಣ್ಣ ಮಾತನಾಡಿದರು. ಆಯುಕ್ತ ಎಚ್.ಎ. ಹರೀಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಮುಷ್ಟರಿ ತನ್ವೀರ್, ಸುಮಿತ್ರಮ್ಮ ರಮೇಶ್, ಲಕ್ಷ್ಮಯ್ಯ, ಶಫಿವುಲ್ಲಾ, ಸಂಧ್ಯಾ ಮಂಜುನಾಥ್‌, ಗಫೂರ್‌ ಸಭೆಯಲ್ಲಿ ಭಾಗವಹಿಸಿದ್ದರು.
ಹಾಜರಿದ್ದರು.

ಎಂಜಿನಿಯರ್ ಬಗ್ಗೆ ಅನುಕಂಪ: ನಗರಸಭಾ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ‘ಎಂಜಿನಿಯರ್‌ ಪ್ರಸಾದ್‌ ಮಾಹಿತಿ ನೀಡುತ್ತಿಲ್ಲ’ ಎಂದು ಆರೋಪಿಸಿದರು. ಆಗ ಶಾಸಕ ಎಂ. ರಾಜಣ್ಣ, ‘ಪಾಪ ಎಂಜಿನಿಯರ್ ಪ್ರಸಾದ್, ಅವರಿಗೇನು ಗೊತ್ತು ಬಿಡ್ರಿ, ಅವರನ್ನು ಬಿಟ್ಟು ಬೇರೆನಾದ್ರೂ ಮಾತನಾಡ್ರಿ’ ಎಂದು ಅನುಕಂಪದ ಮಾತನಾಡಿದರು.

**

ಮೌನಕ್ಕೆ ಶರಣಾದ ಶಾಸಕ
ಶಾಸಕ ಎಂ. ರಾಜಣ್ಣ ಸಾಮಾನ್ಯ ಸಭೆಗೆ ಬರುತ್ತಿದ್ದಂತೆ ವ್ಯವಸ್ಥಾಪಕ ಮಂಜುನಾಥ್ ಸ್ವಾಗತಿಸಲು ಮುಂದಾದರು. ಇದನ್ನು ಗಮನಿಸಿದ ಸದಸ್ಯರು ಏರುಧ್ವನಿಯಲ್ಲಿಯೇ ಮಾತು ಮುಂದುವರಿಸಿದರು. ಸಮಾಧಾನ ಪಡಿಸಲು ಮುಂದಾದರೂ ಸದಸ್ಯರು ಕೇಳಿಸಿಕೊಳ್ಳಲಿಲ್ಲ, ನಂತರ ಸಭೆಯುದ್ದಕ್ಕೂ ಶಾಸಕ ರಾಜಣ್ಣ ಮೌನಕ್ಕೆ ಶರಣಾದರು.

**

ನಾವು ನಮ್ಮ ಮನೆ ಕೆಲಸ ಹೇಳುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಿ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಿ ಅಂದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ
-ಪ್ರಭಾವತಿ ಸುರೇಶ್,
ಶಿಡ್ಲಘಟ್ಟ ನಗರಸಭೆ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.