ADVERTISEMENT

‘ನಿರಂತರ ಜ್ಯೋತಿ’ಗೆ ಆಗ್ರಹಿಸಿ ಪ್ರತಿಭಟನೆ

ವಿದ್ಯುತ್ ಕಣ್ಣು ಮುಚ್ಚಾಲೆ ಆಟದಿಂದ ಬೇಸತ್ತ ಮರಸನಹಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:14 IST
Last Updated 12 ಮೇ 2017, 9:14 IST
‘ನಿರಂತರ ಜ್ಯೋತಿ’ಗೆ ಆಗ್ರಹಿಸಿ ಪ್ರತಿಭಟನೆ
‘ನಿರಂತರ ಜ್ಯೋತಿ’ಗೆ ಆಗ್ರಹಿಸಿ ಪ್ರತಿಭಟನೆ   
ಚಿಕ್ಕಬಳ್ಳಾಪುರ: ದಿನದ 24 ಗಂಟೆಗಳ ಕಾಲ ವಿದ್ಯುತ್ ನೀಡುವ ‘ನಿರಂತರ ಜ್ಯೋತಿ’ ಸಂಪರ್ಕ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಮರಸನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮನೆಗಳ ನಾಗರಿಕರು ಗುರುವಾರ ನಗರದಲ್ಲಿರುವ ಬೆಸ್ಕಾಂನ ನಗರ ಉಪ ವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  
 
ಕಳೆದ ಮೂರು ದಿನಗಳಿಂದ ವಿದ್ಯುತ್ ನೀಡಿಲ್ಲ. ಸದ್ಯ ಹಗಲು, ರಾತ್ರಿ ಸೇರಿ ಕೇವಲ ಎರಡು ತಾಸು ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ. ಆದ್ದರಿಂದ ಮರಸನಹಳ್ಳಿ ವರೆಗೆ ಇರುವ ‘ನಿರಂತರ ಜ್ಯೋತಿ’ ಸಂಪರ್ಕವನ್ನು ತಮ್ಮ ಮನೆಗಳಿಗೂ ಕೂಡ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
 
ಪ್ರತಿಭಟನಾಕಾರರ ಅಹವಾಲು ಆಲಿಸಿದ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್‌. ಮಂಜುನಾಥ್, ‘ಈ ಹಿಂದೆ ಏಕೆ ಅಲ್ಲಿ  ‘ನಿರಂತರ ಜ್ಯೋತಿ’ ಸಂಪರ್ಕ ಕೊಟ್ಟಿಲ್ಲ ನನಗೆ ಗೊತ್ತಿಲ್ಲ.

ಇವತ್ತು ಸಂಜೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ವ್ಯಾಪ್ತಿಯಲ್ಲಿ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದರೆ ಖಂಡಿತ ಸಂಪರ್ಕ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು. 
 
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ಈ ಜನರ ಸಮಸ್ಯೆ ಕುರಿತು ಅನೇಕ ಬಾರಿ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ. ಆದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈವರೆಗೆ ಅಲ್ಲಿ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಕೆಲಸವಾಗಿಲ್ಲ. ಈ ಕುರಿತು ನಾಗರಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು. 
 
‘ಗ್ರಾಮದ ಕೆಲವರು ತಮ್ಮ ಬೋರ್‌ವೆಲ್‌ಗಳಿಗೆ ನಿರಂತರ ಜ್ಯೋತಿ ಮಾರ್ಗದಿಂದ ವಿದ್ಯುತ್ ಪಡೆಯುತ್ತಿರುವುದನ್ನೇ ನೆಪವಾಗಿಟ್ಟುಕೊಂಡು ಅಧಿಕಾರಿಗಳು ಬಡ ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ.
 
ಇದೀಗ ಎಇಇ ಅವರು ಸ್ಥಳ ಪರಿಶೀಲಿಸಿ ಕಾರ್ಯನಿರ್ವಾಹಕ ಎಂಜನಿಯರ್‌ಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಕಚೇರಿಗಳಿಗೆ ಬೀಗ ಹಾಕಿ ಧರಣಿ ನಡೆಸುತ್ತೇವೆ’ ಎಂದು ತಿಳಿಸಿದರು. 
 
ಹಾರೋಬಂಡಿ ಗ್ರಾಮ ಪಂಚಾಯಿತಿ ಸದಸ್ಯೆ ಮುನಿಲಕ್ಷ್ಮಮ್ಮ ಮಾತನಾಡಿ, ‘ಹೊರವಲಯದಲ್ಲಿರುವ ಮನೆಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಪಂಚಾಯಿತಿ ಕಡೆಯಿಂದ ಪತ್ರ ಬರೆದರೂ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
 
ರಾತ್ರಿ ವೇಳೆ ಜನರು ವಿದ್ಯುತ್ ವ್ಯತ್ಯಯದಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ನಿರಂತರ ಜ್ಯೋತಿ ಸಂಪರ್ಕ ನೀಡಬೇಕು’ ಎಂದು ಆಗ್ರಹಿಸಿದರು. ಮರಸನಹಳ್ಳಿಯ ಕುಶಕುಮಾರ್, ನವೀನ್‌ಕುಮಾರ್, ಗಂಗಾಧರ್, ವೀಣಾ, ಆಶಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.