ADVERTISEMENT

ನೀರು ಹಂಚಿಕೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 9:35 IST
Last Updated 6 ಏಪ್ರಿಲ್ 2017, 9:35 IST
ನೀರು ಹಂಚಿಕೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ
ನೀರು ಹಂಚಿಕೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ   

ಬಾಗೇಪಲ್ಲಿ: ಕಾವೇರಿ ನೀರು ಹಂಚಿಕೆ, ಬೆಳಗಾವಿ ಗಡಿ ವಿವಾದ, ಉದ್ಯೋಗ ವಿಚಾರದಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದೆ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶಿಕೇಂದ್ರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬುಧವಾರ ಅಯೋಜಿದ್ದ 5ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡ ಭಾಷೆಗೆ  ನೆಲ, ಜಲ, ಮಾಧ್ಯಮ, ಶಿಕ್ಷಣ ಕ್ಷೇತ್ರದಿಂದ ಸಮಸ್ಯೆಗಳು ಎದುರಾಗುತ್ತಿವೆ. ಸಮಸ್ಯೆಗಳ ಬಗ್ಗೆ ಚಿಂತನೆ, ಹೋರಾಟಗಳು ನಡೆಯುತ್ತಿದ್ದರೂ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದರೆ,  ರಾಜ್ಯದ ರಾಜಕೀಯ ಪಕ್ಷಗಳು ರಾಜ್ಯದ ಜನರ ಸಮಸ್ಯೆ ಸ್ಪಂದಿಸುತ್ತಿರುವುದು ವಿರಳ ಎಂದು ತಿಳಿಸಿದರು.

ADVERTISEMENT

ಮಹಾದಾಯಿ ಹೋರಾಟದಲ್ಲಿ ಭಾಗವಹಿಸಿದ್ದ  ರೈತರ ಮೇಲೆ ಸರ್ಕಾರ ಪ್ರಕರಣ ದಾಖಲಿಸಿರುವುದು ವಿರ್ಪಯಾಸ.  ನೀರಿಗಾಗಿ ಹೋರಾಟ ಮಾಡುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸುವುದು ಸರಿಯಲ್ಲ.  ಅಂಗನವಾಡಿ ಕಾರ್ಯಕರ್ತರು ಮತ್ತು  ರೈತರ ಮೇಲೆ ದಾಖಲಿಸಿರುವ ಕೇಸುಗಳು ವಾಪಸ್ ಪಡೆಯಬೇಕು ಎಂದರು.

ನಗರಗಳ ಅಭಿವೃದ್ಧಿಯಿಂದ ಸಮಗ್ರ ಭಾರತ ಅಭಿವೃದ್ಧಿಯಾಗುತ್ತದೆ ಎಂಬ ಕನಸಿನಿಂದ ಸರ್ಕಾರಗಳು ಹೊರಬರಬೇಕಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದು ತಿಳಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗಾಗಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ  ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜನರಲ್ಲಿ ಅಸಕ್ತಿ ಕಡಿಮೆಯಾಗುತ್ತಿದೆ. ಸಾಹಿತಿಗಳು ಭಾಗವಹಿಸುವ ಕನ್ನಡ ಸಮ್ಮೇಳನಗಳಲ್ಲಿ ಯುವಕರಿಗೆ ಅವಶ್ಯಕತೆ ಹಿತವಚನ ನೀಡಬೇಕು ಎಂದು ತಿಳಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿ, ತಾಲ್ಲೂಕಿನಾದ್ಯಂತ ಮಾತನಾಡುವುದು ತೆಲುಗು ಭಾಷೆಯಾದರೂ ಕನ್ನಡ ಬಾಷೆ ಬಗ್ಗೆ ಹೆಚ್ಚು ಕಾಳಜಿ, ಪ್ರೀತಿಯುಳ್ಳ ಜನರು ಇಲ್ಲಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕನ್ನಡ ಕಾರ್ಯಕ್ರಮ ಗಡಿ ಭಾಗದ ಗೂಳೂರುನಲ್ಲಿ ಕನ್ನಡ ಕಾರ್ಯಕ್ರಮ ಅಯೋಜಿಸಿ ಕನ್ನಡದ ಕಂಪನ್ನು ಪಸರಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಸಮ್ಮೇಳನ ಅಧ್ಯಕ್ಷರಾದ ಬಿ.ಎಂ.ನಾಗಭೂಷಣಾರಾಧ್ಯ ಅವರನ್ನು ಕಾರ್ಯಕ್ರಮಕ್ಕೂ ಮೊದಲು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಜಿ.ಪಂ. ಸದಸ್ಯ ಲಕ್ಷ್ಮಿನರಸಿಂಹಪ್ಪ, ಗ್ರಾ.ಪಂ.ಅಧ್ಯಕ್ಷ ಮುನ್ನಾಖಾನ್, ಮುಖಂಡರಾದ ಎಸ್.ಎಸ್.ರಮೇಶ್‌ಬಾಬು, ಕಸಾಪ ನಿಕಟ ಪೂರ್ವ ಅಧ್ಯಕ್ಷ ಬಿ.ಆರ್.ಕೃಷ್ಣ, ನಿಕಟ ಪೂರ್ವ ಗೌರಾಧ್ಯಕ್ಷ ಕೆ.ಟಿ.ವೀರಾಂಜನೇಯ, ಕಸಾಪ ತಾಲ್ಲೂಕು ಕಾರ್ಯದರ್ಶಿ ಡಿ.ಎನ್.ಕೃಷ್ಣಾರೆಡ್ಡಿ, ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜುರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.