ADVERTISEMENT

ನೌಕರಶಾಹಿ, ಸಂಘಟನೆಗಳು ಜವಾಬ್ದಾರಿ ಮರೆಯಬಾರದು

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 9:04 IST
Last Updated 12 ಜುಲೈ 2017, 9:04 IST

ಚಿಕ್ಕಬಳ್ಳಾಪುರ: ‘ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ನೌಕರಶಾಹಿಗೆ ಇರುವ ಉತ್ತರದಾಯಿತ್ವದಷ್ಟೇ, ಕನ್ನಡ ಬೆಳೆಸುವಲ್ಲಿ ಕನ್ನಡ ಪರ ಸಂಘಟನೆಗಳಿಗೂ ಬಾಧ್ಯತೆ ಇದೆ. ಪ್ರತಿಯೊಬ್ಬರು ಈ ಭಾಷೆ ನಮ್ಮದು ಎಂಬ ಗುಣಾತ್ಮಕ ಸಂಬಂಧವಿಟ್ಟುಕೊಂಡಾಗ ವಾತಾವರಣವನ್ನು ಸಂಪೂರ್ಣ ಕನ್ನಡಮಯ ಮಾಡಲು ಸಾಧ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರಕ್ಕೆ ಮಂಗಳವಾರ ಜಿಲ್ಲಾ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಸಭೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ನಡೆಸಿದ ಜಿಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.

‘ಯಾವುದೇ ಭಾಷೆಯನ್ನು ಕುರುಡಾಗಿ ವಿರೋಧಿಸುವುದು ಸಲ್ಲದು. ಭಾಷೆಯೊಂದು ಸಹಿಷ್ಣುತೆಯೊಂದಿಗೆ ಬೆಳೆಯಬೇಕು. ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ತೆಲುಗು ಸಹಿಷ್ಣುತೆಗೆ ಹೆಸರಾಗಿರುವ ಭಾಷೆಗಳು. ಆದ್ದರಿಂದ ಈ ಭಾಷೆಗಳ ವಿಚಾರದಲ್ಲಿ ಗೆರೆ ಕೊರೆದಂತೆ ಮಾತನಾಡುವ ಬದಲು ಉದಾರವಾಗಿ ಯೋಚನೆ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಜಿಲ್ಲೆಯಲ್ಲಿರುವ ಅನೇಕ ಗ್ರಾಮಗಳ ಹೆಸರುಗಳನ್ನು ಕನ್ನಡಕ್ಕೆ ಬದಲಾಯಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪ್ರತಿ ಗ್ರಾಮದ ಹೆಸರಿನೊಂದಿಗೆ ತನ್ನದೇ ಆದ ನೆಲಮೂಲದ ಐತಿಹಾಸಿಕ ನಂಟಿರುತ್ತದೆ. ಆದ್ದರಿಂದ ನಾವು ಹೆಸರುಗಳನ್ನು ಬದಲು ಮಾಡುವುದರಿಂದ ಆ ಐತಿಹಾಸಿಕತೆಗೆ ಆಗುವ ಅನಾಹುತಗಳು ಬಹಳ ಅಪಾಯಕಾರಿ.

ನಮ್ಮ ಭಾಷಿಕ ವ್ಯವಸ್ಥೆಯ ಒಳಗೆ ನಾವು ಅಪಾಯಕಾರಿ ಅಲ್ಲದ ಕೆಲ ವಿಚಾರಗಳನ್ನು ಸಹಿಸಿಕೊಳ್ಳಬೇಕು. ಅನ್ಯಭಾಷೆಯ ಹೆಸರುಗಳಿಗಿಂತ ನಮ್ಮ ಪರಿಸರದಲ್ಲಿ ನಾವು ನಮ್ಮ ಭಾಷೆಯನ್ನು ಹೇಗೆ ಬೆಳೆಸುತ್ತೇವೆ ಎನ್ನುವುದು ಮುಖ್ಯ’ ಎಂದು ಅವರು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್ ಮಾತನಾಡಿ, ‘ಪ್ರಾಧಿಕಾರ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮತ್ತು ಸರೋಜಿನಿ ಮಹಿಷಿ ವರದಿ ಪ್ರಕಾರ ಉದ್ಯೋಗದಲ್ಲಿ ಮೀಸಲಾತಿ ಜಾರಿ ವಿಚಾರಗಳ ಮೇಲ್ವಿಚಾರಣೆ ನಡೆಸುತ್ತದೆ.

ಈ ಎರಡು ವಿಚಾರಗಳಲ್ಲಿ ರಾಜ್ಯ ಮಟ್ಟದಲ್ಲಿ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ವಿಭಾಗಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಮತ್ತು  ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರು ಕನ್ನಡ ಅನುಷ್ಠಾನಾಧಿಕಾರಿ ಆಗಿರುತ್ತಾರೆ.

ಈ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಾಗ ಪ್ರಾಧಿಕಾರ ಅವರಿಗೆ ಎಚ್ಚರಿಕೆ ನೀಡುವುದು, ವಾಗ್ಧಂಡನೆ ವಿಧಿಸುವುದು, ಪದೋನ್ನತಿ ತಡೆಯುವಂತಹ ಶಿಸ್ತುಕ್ರಮ ಜರುಗಿಸುವ ಅಧಿಕಾರ ಹೊಂದಿದೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ಕೋಡಿ ರಂಗಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಶಿಡ್ಲಘಟ್ಟದ ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿದರು.

ಪ್ರಾಧಿಕಾರದ ಸದಸ್ಯರಾದ ಪ್ರಭಾಕರ್ ಪಟೇಲ್, ಗಿರೀಶ್‌ ಪಟೇಲ್‌, ಪುಟ್ಟಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಕನ್ನಡ ಜಾಗೃತಿ ಸಮಿತಿ ಸದಸ್ಯ ಮಂಚನಬಲೆ ಶ್ರೀನಿವಾಸ್, ಸಾಹಿತಿಗಳಾದ ಸುಭಾನ್‌ ಪ್ರಿಯಾ, ಸರಸಮ್ಮ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಾತಮುತ್ತಕಹಳ್ಳಿ ಎಂ.ಚಲಪತಿಗೌಡ, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಗೋವಿಂದ್‌ರಾಜು, ವಚನ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ನವಮೋಹನ್‌, ಮುಖಂಡರಾದ ಹನುಮಂತರಾವ್, ಕೇತೇನಹಳ್ಳಿ ಕೃಷ್ಣಾರೆಡ್ಡಿ, ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.