ADVERTISEMENT

ಪರಿಸರ ಸಂರಕ್ಷಣೆ ಮನೋಭಾವನೆ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 28 ಮೇ 2017, 5:37 IST
Last Updated 28 ಮೇ 2017, 5:37 IST
ಪೂರ್ವ ಭಾವಿ ಸಭೆಯಲ್ಲಿ ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿದರು
ಪೂರ್ವ ಭಾವಿ ಸಭೆಯಲ್ಲಿ ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಮಾತನಾಡಿದರು   

ಗೌರಿಬಿದನೂರು: ‘ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ತಾಪಮಾನ ಕಡಿಮೆಯಾಗಬೇಕಾದರೆ ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕಾಗಿದೆ’ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಎಚ್.ಎನ್.ಕಲಾಭವನದಲ್ಲಿ ಪುರಸಭೆ, ಅರಣ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರು ಬೃಹತ್ ಗಿಡ ನೆಡುವ ಕಾರ್ಯಕ್ರಮದ ಅಂಗವಾಗಿ ಶನಿವಾರ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೂನ್ 5ರಂದು 6 ಲಕ್ಷ ಗಿಡಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ‘ಪಟ್ಟಣದ ರಸ್ತೆ, ಉದ್ಯಾನ, ಶಾಲಾ ಕಾಲೇಜು, ವಿವಿಧ ಕಚೇರಿಗಳ ಆವರಣದಲ್ಲಿ ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಬೃಹತ್ ಆಂದೋಲನ ಏರ್ಪಡಿಸಲಾಗಿದೆ’ ಎಂದರು.

ADVERTISEMENT

‘ಗಿಡ ನೆಡುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಸಾರ್ವಜನಿಕರು ಶಾಲಾ ಕಾಲೇಜು ಮಕ್ಕಳು ಭಾಗವಹಿಸಿ ಗಿಡ ನೆಟ್ಟು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ’ ಎಂದರು. ‘ಸರ್ಕಾರವೇ ಎಲ್ಲವನ್ನು ಮಾಡುತ್ತದೆ ಎನ್ನುವ ಮನೋಭಾವನೆ ಜನರಲ್ಲಿ ಹೋಗಬೇಕು. ಪ್ರತಿಯೊಬ್ಬರು ತಮ್ಮ ವ್ಯಾಪ್ತಿ ಪ್ರದೇಶದಲ್ಲಿರುವ ಮನೆ ಅಂಗಳದಲ್ಲಿರುವ ಗಿಡಗಳನ್ನು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ’ ಎಂದರು.

‘ತಮ್ಮ ಮನೆ ಮುಂದೆ ನೆಟ್ಟ ಗಿಡಕ್ಕೆ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆಯುವ ನೀರು ಹಾಕುವ ಮೂಲಕ ಗಿಡಗಳನ್ನು ಬೆಳೆಸಬಹುದು’ ಎಂದರು. ‘ತಾಲ್ಲೂಕಿನ ವಿವಿಧ ಬ್ಯಾಂಕ್ ಅಧಿಕಾರಿಗಳು ತಮ್ಮ ಬ್ಯಾಂಕ್ ಲಾಭಾಂಶದ ಹಣದಲ್ಲಿ ಪಟ್ಟಣದಲ್ಲಿ ಒಂದೊಂದು ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ. ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಟ 2 ಸಾವಿರ ಗಿಡಗಳನ್ನು  ವಿಶ್ವಪರಿಸರ ದಿನದಂದು ನೆಟ್ಟು ಸಂರಕ್ಷಣೆ ಮಾಡಬೇಕು’ ಎಂದರು.

‘ತಾಲ್ಲೂಕಿನಲ್ಲಿ ಕಳೆದ ಹತ್ತು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನೆಡುವ ಎಲ್ಲ ಗಿಡಗಳು ಉಳಿಯಲು ಸಾಧ್ಯ. ಉತ್ತರ ಪಿನಾಕಿನಿ ನದಿಯ ದಡದಲ್ಲಿರುವ ಗ್ರಾಮ ಪಂಚಾಯಿತಿಗಳು ನದಿಯ ಇಕ್ಕೆಲಗಳಲ್ಲಿ 1ಲಕ್ಷ ಗಿಡಗಳನ್ನು ನೆಡಬೇಕು’ ಎಂದರು.

ತಹಶೀಲ್ದಾರ್ ಎಂ.ನಾಗರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಪ್ಪರೆಡ್ಡಿ, ಪುರಸಭೆ ಅಧ್ಯಕ್ಷ ಕಲೀಂಉಲ್ಲಾ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ನರಸಿಂಹಮೂರ್ತಿ, ಇಒ ಡಾ. ನಾರಾಯಣಸ್ವಾಮಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಂಗರೆಡ್ಡಿ ಇದ್ದರು.

ತಾಲ್ಲೂಕಿನಲ್ಲಿ ಶೇ 60 ರಷ್ಟು ಕುಟುಂಬ ಶೌಚಾಲಯ ನಿರ್ಮಾಣ
ಗೌರಿಬಿದನೂರು ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಕಳೆದ 10 ವರ್ಷಗಳ ಹಿಂದೆ  ಯಾವುದೇ ಕುಟುಂಬ ಶೌಚಾಲಯವನ್ನು  ಹೊಂದಿರಲ್ಲಿಲ್ಲ.  ಈಗ ಸರ್ಕಾರ ಅನುದಾನ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಶೇ 60 ರಷ್ಟು ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿದೆ. ಇದೇ ರೀತಿಯಲ್ಲಿ ಗಿಡಗಳನ್ನು ಬೆಳೆಸಿ ಸಂರಕ್ಷಣೆ ಮಾಡುವ ಅರಿವು ಜನರಲ್ಲಿ ಬೆಳೆಯಬೇಕಾಗಿದೆ’ ಎಂದು ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.