ADVERTISEMENT

ಪಶ್ಚಿಮ ಬಂಗಾಳ ಸರ್ಕಾರ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:42 IST
Last Updated 24 ಮೇ 2017, 6:42 IST

ಬಾಗೇಪಲ್ಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ರೈತಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸ್‌ ದೌರ್ಜನ್ಯ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸರ್ಕಾರ ವಜಾ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.

ಪಶ್ಚಿಮ ಬಂಗಾಳದಲ್ಲಿ ರೈತರ ಮೇಲೆ ನಡೆದ ಲಾಠಿ ಪ್ರಹಾರ ನಡೆಸಿದ ಪಶ್ಚಿಮ ಬಂಗಾಳ ಸರ್ಕಾರದ ಧೋರಣೆ ಖಂಡಿಸಿ ರಸ್ತೆ ತಡೆ ನಡೆಸಿದ ನಂತರ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌ಎನ್‌) ತಾಲ್ಲೂಕು ಘಟಕದ ಕಾರ್ಯದರ್ಶಿ ಜೆಸಿಬಿ ಮಂಜುನಾಥ ರೆಡ್ಡಿ, ರೈತರ ಮೇಲೆ ಏಕಾಏಕಿ ದಾಳಿ ನಡೆಸಿ, ಮನಬಂದಂತೆ ಹಲ್ಲೆ ನಡೆಸಿದ್ದು ಖಂಡನೀಯ. ಇಂಥ ಅಮಾನವೀಯ ಕೃತ್ಯದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು

ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ಆಳುವ ಎಲ್ಲ ಸರ್ಕಾರಗಳು ನಿರಂತರವಾಗಿ ಶೋಷಣೆ ಮಾಡುತ್ತಿವೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಹೋರಾಡುತ್ತಿರುವ ರೈತರ ಸಮಸ್ಯೆಗೆ ಸ್ಪಂದಿಸುವ ಬದಲಾಗಿ ದೌರ್ಜನ್ಯ ನಡೆಸುವುದು ಕಾನೂನು ವಿರೋಧಿ ಧೋರಣೆ. ಇದು ಸರ್ಕಾರದ ಅಮಾನವೀಯ ವರ್ತನೆಯ ಸಂಕೇತ ಎಂದು ಟೀಕಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮ ನಾಯಕ್, ಎಚ್.ಎಸ್. ಚಂದ್ರಶೇಖರ ರೆಡ್ಡಿ, ಹೇಮಚಂದ್ರ, ಅಶ್ವತ್ಥನಾರಾಯಣ, ನಾರಾಯಣಸ್ವಾಮಿ, ಎ.ಎಸ್. ಶ್ರೀರಾಮಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.