ADVERTISEMENT

ಪುಣ್ಯ ಸಂಚಯಕ್ಕೆ ಪಂಚಗಿರಿಗಳ ಪ್ರದಕ್ಷಿಣೆ

ಆಷಾಢ ಕೊನೆ ಸೋಮವಾರ ನಂದಿಗಿರಿಯ ಹಸಿರ ಹಾದಿಯಲ್ಲಿ ಆಸ್ತಿಕ ಸಮೂಹದ ಶ್ರದ್ಧಾಭಕ್ತಿಯ ನಡಿಗೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:54 IST
Last Updated 18 ಜುಲೈ 2017, 5:54 IST

ಚಿಕ್ಕಬಳ್ಳಾಪುರ: ಅರುಣೋದಯಕ್ಕೆ ಮುನ್ನವೇ ಅಲ್ಲಿ ಆಸ್ತಿಕರ ಸಮೂಹ ಹಿಂಡು ಹಿಂಡಾಗಿ ಬರಲು ಆರಂಭಿಸಿತ್ತು. ಗಿರಿಧಾಮಗಳ ತಪ್ಪಲಲ್ಲಿ ಬೆಳಕು ಹರಿಯುವ ಮುನ್ನವೇ ತಾರಕಕ್ಕೆ ತಲುಪಿದ ಶಿವನಾಮ ಸ್ಮರಣೆಯ ಜಪ ಪಶು–ಪಕ್ಷಿಗಳ ಕಲರವವನ್ನು ಅಡಗಿಸಿತ್ತು. ದಣಿವರಿಯದ ಕಾಲುಗಳು ದಾರಿ ಸವೆಸಲು ಹವಣಿಸುತ್ತಿದ್ದರೆ ಕೈಗಳು ಭಜನೆಗೆ ತಾಳ ಹಾಕುತ್ತಿದ್ದವು. ಪಂಚಗಿರಿಗಳನ್ನು ಸುತ್ತಿ ಕೊನೆಗೆ ಭೋಗ ನಂದಿಯ ಸನ್ನಿಧಿಗೆ ಬಂದವರ ಮೊಗದಲ್ಲಿ ಪುಣ್ಯ ಸಂಚಯದ ಪ್ರಸನ್ನತೆ ಇಣುಕುತ್ತಿತ್ತು.

ಆಷಾಢ ಮಾಸದ ಕೊನೆ ಸೋಮವಾರ ನಂದಿಗಿರಿಧಾಮದ ತಪ್ಪಲಲ್ಲಿ ನಡೆದ 79ನೇ ವರ್ಷದ ‘ನಂದಿಗಿರಿ ಪ್ರದಕ್ಷಿಣೆ’ ವೇಳೆ ಕಂಡ ಚಿತ್ರಣವಿದು. ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಶ್ರದ್ಧಾಭಕ್ತಿಯಿಂದ ಹೆಜ್ಜೆ ಹೆಜ್ಜೆಗೂ ಶಿವನಾಮ ಭಜಿಸುತ್ತ  ಸಾವಿರಾರು ಜನರು ಸುಮಾರು 15 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರೈಸಿದರು.

ಬೆಳಿಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ಸ್ವಾಮಿ ದೇಗುಲದಲ್ಲಿ ನಂದಿಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ಪದಾಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಪ್ರದಕ್ಷಿಣೆಗೆ ಚಾಲನೆ ದೊರೆಯಿತು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ದೇವನಹಳ್ಳಿ, ವಿಜಯಪುರ, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ ಸೇರಿದಂತೆ ವಿವಿಧಡೆಯಿಂದ ಹರಿದು ಬಂದಿದ್ದ ಭಕ್ತ ಸಮೂಹ ಅಬಾಲವೃದ್ಧರಾದಿಯಾಗಿ ಪ್ರದಕ್ಷಿಣೆಯಲ್ಲಿ ಹೆಜ್ಜೆ ಹಾಕಿದರು.

ADVERTISEMENT

ಭೋಗನಂದೀಶ್ವರ ದೇವಾಲಯದಿಂದ ಕುಡುವತಿ, ಕಾರಹಳ್ಳಿ ಕ್ರಾಸ್, ನಂದಿ ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂಧೀಪುರ, ಕಣಿವೆಪುರ, ಸುಲ್ತಾನ್‌ಪೇಟೆ ಮಾರ್ಗವಾಗಿ ಸಾಗಿ ನಂದಿಗಿರಿ, ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ ಮತ್ತು ಚನ್ನಗಿರಿಯನ್ನು ಸುತ್ತುವರಿದು ಪುನಃ ಭೋಗನಂದಿ ದೇವಾಲಯದ ಬಳಿ ಬಂದವರು ಪ್ರದಕ್ಷಿಣೆ ಸಂಪನ್ನಗೊಳಿಸುತ್ತಿದ್ದರು.

ನಂದಿಗಿರಿ ಪ್ರದಕ್ಷಿಣೆಯಲ್ಲಿ ಹೆಜ್ಜೆ ಹಾಕುತ್ತಿದ್ದವರಿಗೆ ದಾರಿಯುದ್ಧಕ್ಕೂ ಅನೇಕ ಸಂಘ–ಸಂಸ್ಥೆಗಳ ಸದಸ್ಯರು, ನಾಗರಿಕರು ಉಪಾಹಾರ ಸೇರಿದಂತೆ ಕುಡಿಯುವ ನೀರು, ಬಿಸ್ಕತ್, ಕಲ್ಲುಸಕ್ಕರೆ, ಕರ್ಜೂರ, ಮಜ್ಜಿಗೆ, ಮೊಳಕೆಕಾಳು, ಹಣ್ಣು ನೀಡುವ ಮೂಲಕ ಈ ಧಾರ್ಮಿಕ ಕೈಂಕರ್ಯಕ್ಕೆ ತಮ್ಮ ಭಕ್ತಿಯ ಸೇವೆ ಸಲ್ಲಿಸಿದರು. ಪ್ರದಕ್ಷಿಣೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಏಳು ದಶಕಗಳಿಗಿಂತ ಅಧಿಕ ಇತಿಹಾಸ ಹೊಂದಿರುವ ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಆಸ್ತಿಕರೊಂದಿಗೆ ಪರಿಸರ ಪ್ರೇಮಿಗಳು ಕೂಡ ಹೆಜ್ಜೆ ಹಾಕುತ್ತಿದ್ದದ್ದು ಕಂಡುಬಂತು. ಪ್ರದಕ್ಷಿಣೆಯ ದಾರಿ ಸವೆಸುತ್ತಿದ್ದವರು. ಅಲ್ಲಲ್ಲಿ ನಿಂತು ಸುತ್ತಲಿನ ರಮ್ಯ ಪ್ರಕೃತಿಯ ದೃಶ್ಯಕಾವ್ಯಕ್ಕೆ ಬೆನ್ನು ಮಾಡಿ ನಿಂತು ಮೊಬೈಲ್‌ ‘ಸೆಲ್ಫಿ’ಗೆ ಮುಖವೊಡ್ಡುತ್ತ ಹೆಜ್ಜೆ ಹಾಕುತ್ತಿದ್ದದ್ದು ಗೋಚರಿಸಿತು.

‘ನಂದಿ ಬೆಟ್ಟಕ್ಕೆ ವಾರಾಂತ್ಯದ ಮೋಜಿಗಾಗಿ ಸಾಕಷ್ಟು ಬಾರಿ ಬಂದಿರುವೆ. ಅನೇಕ ಬಾರಿ ಬೆಟ್ಟದ ತಪ್ಪಲಲ್ಲಿ ಸೈಕಲ್‌ ತುಳಿದಿರುವೆ. ಆದರೆ ಇದು ಅವುಗಳಿಂದ ಭಿನ್ನವಾದ ಅನುಭೂತಿ ಇದು. ಅಧ್ಯಾತ್ಮ ಮತ್ತು ಆರೋಗ್ಯದ ಬೆಸುಗೆಯಂತಿರುವ ಈ ನಡುಗೆ ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ನೀಡಿದಂತಿತ್ತು. ಮುಂದಿನ ಬಾರಿ ಮತ್ತಷ್ಟು ಗೆಳೆಯರೊಂದಿಗೆ ಬಂದು ಭಾಗವಹಿಸುವೆ’ ಎಂದು ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಪ್ರಜ್ವಲ್‌ ಹೇಳಿದರು.

**

ಅನೇಕ ವರ್ಷಗಳಿಂದ ಈ ಪ್ರದಕ್ಷಿಣೆಯಲ್ಲಿ ಭಾಗವಹಿಸುತ್ತಿದ್ದೇನೆ. ಪುಣ್ಯಕ್ಕಿಂತಲೂ ಹೆಚ್ಚಾಗಿ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಲು ನಾನಿಲ್ಲಿಗೆ ಬರುವೆ.
-ಅವಿನಾಶ್, ದೊಡ್ಡಬಳ್ಳಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.