ADVERTISEMENT

ಬದುಕು ಕಟ್ಟಿಕೊಟ್ಟ ಸಂತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 5:32 IST
Last Updated 7 ಸೆಪ್ಟೆಂಬರ್ 2017, 5:32 IST

ಗುಡಿಬಂಡೆ: ಹಿಂದುಳಿದ ಸಮುದಾಯ ದಲ್ಲಿ ಜಾಗೃತಿ ಮೂಡಿಸಿ ಅವರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ನಾರಾಯಣ ಗುರು ಶ್ರೇಷ್ಠ ಸಂತ ಎಂದು ರೇಷ್ಮೆ ಇಲಾಖೆಯ ಮಂಜುನಾಥ ಗಣಪತಿ ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಪ್ರತಿಪಾದಿಸಿದ ಗುರುಗಳ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

‘ಹಿಂದುಳಿದ ಸಮಾಜದ ಅಭಿವೃದ್ಧಿ ಆಶಯದಲ್ಲಿ ಪ್ರತಿಬಿಂಬಿಸಿದ ಸಂದೇಶಗಳನ್ನು ಪಾಲಿಸುವ ಮೂಲಕ ಆದರ್ಶಪ್ರಾಯವಾದ ಜೀವನ ನಡೆಸಬೇಕು. ಸನಾತನ ಭಾರತೀಯ ಪರಂಪರೆಯ ಚಿಂತನಾಧಾರೆಯಡಿ ಆಧ್ಯಾತ್ಮಿಕ ಜಾಗೃತಿಯ ಜತೆಗೆ ವಿಘಟಿತ ಸಮುದಾಯವನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಂಘಟನಾತ್ಮಕವಾಗಿ ಒಂದುಗೂಡಿಸಿದ ನಾರಾಯಣ ಗುರು ಕ್ರಾಂತಿಕಾರಿ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ವರಲಕ್ಷ್ಮಿ ಮಾತನಾಡಿ, ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿದ್ದ ಅಸ್ಪೃಶ್ಯತೆ, ಕಂದಾಚಾರಗಳನ್ನು ತೊಲಗಿಸುವ ನಿಟ್ಟಿನಲ್ಲಿ ನಾರಾಯಣ ಗುರುಗಳ ಪಾತ್ರ ದೊಡ್ಡದು. ಈಡಿಗ ಜನಾಂಗ ಹಿಂದುಳಿದ ಸಮುದಾಯವಾಗಿದ್ದು, ಶೈಕ್ಷಣಿಕವಾಗಿಯೂ ಹಿಂದುಳಿದಿದೆ. ಹಿರಿಯರ ಮಾರ್ಗದರ್ಶನದಲ್ಲಿ ಜನಾಂಗ ಅಭಿವೃದ್ಧಿ ಕಾಣಬೇಕಾಗಿದೆ ಎಂದು ಸಲಹೆ ನೀಡಿದರು.

‘ನಾರಾಯಣ ಗುರು ಕೆಳಜಾತಿ ಯವರು ವಿದ್ಯೆ ಕಲಿತು, ವೈಚಾರಿಕ ಪ್ರಜ್ಞೆಯನ್ನು, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಂಡು ಸ್ವಾವಲಂಬಿಯಾಗಬೇಕು ಎಂದು ಬಯಸಿದ್ದರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನುಕುಲಕ್ಕೆ ಲೇಸನ್ನು ಬಯಸಿದ ಗುರುಗಳಿಗೆ ಗೌರವ ಸಲ್ಲಿಸಬೇಕು’ ಎಂದು ನುಡಿದರು.

ಗ್ರೇಡ್ -2 ತಹಶೀಲ್ದಾರ್ ಸಿಗ್ಬತ್ ಉಲ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ ಕೃಷ್ಣೇಗೌಡ, ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು, ಕೆಡಿಪಿ ಸದಸ್ಯ ಕೃಷ್ಣೇಗೌಡ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ಸ್ವಾಮಿ, ಕಾರ್ಯದರ್ಶಿ ವರದರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.