ADVERTISEMENT

ಬರದಲ್ಲೂ ರೈತರಿಗೆ ಸಿಹಿ ತಂದ ಹುಳಿಮಾವು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:24 IST
Last Updated 11 ಏಪ್ರಿಲ್ 2017, 10:24 IST

ಶ್ರೀನಿವಾಸಪುರ: ತಾಲ್ಲೂಕು ಮಾವು ಬೆಳೆಗೆ ಪ್ರಸಿದ್ಧಿ. ಹಲವು ತಳಿಯ ಮಾವನ್ನು ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಮಳೆ ಕೊರತೆಯ ಕಾರಣ ಬಹುತೇಕ ತಳಿಯ ಮಾವಿನ ಗಿಡಗಳು ಕಾಯಿ ಕಟ್ಟಿಲ್ಲ. ಮರಗಳಲ್ಲಿರುವ ಅಲ್ಪಸ್ವಲ್ಪ ಕಾಯಿಗಳೂ ಬಿಸಿಲ ಧಗೆಗೆ ಉದುರುತ್ತಿವೆ. ಆದರೆ ನಾಟಿ ಹುಳಿಮಾವಿನ ಮರಗಳು ಮಾತ್ರ ಹೇರಳವಾಗಿ ಕಾಯಿಯನ್ನು ತುಂಬಿಕೊಂಡಿವೆ. ನಾಟಿ ಹುಳಿ ಮಾವು ರೈತನ ಪಾಲಿಗೆ ಸಿಹಿಯಾಗಿದೆ.

ಹಿಂದೆ ರಸ್ತೆಗಳ ಇಕ್ಕೆಲಗಳಲ್ಲಿ, ಗುಂಡು ತೋಪುಗಳಲ್ಲಿ ಹಾಗೂ ಕಂದಾಯ ಜಮೀನುಗಳಲ್ಲಿ ನಾಟಿ ಹುಳಿಮಾವಿನ ಮರಗಳು ಬೆಳೆದಿರುತ್ತಿದ್ದವು. ಈ ಬೃಹತ್ ಮರಗಳನ್ನು ಏರುವುದು ತುಂಬಾ ಕಷ್ಟ. ಹಣ್ಣಾಗುವ ಕಾಲಕ್ಕೆ ಹಳ್ಳಿ ಮಕ್ಕಳು ಬೆಳಿಗ್ಗೆ ಮರದ ಬಳಿ ಹೋಗಿ ಉದುರಿದ ಹಣ್ಣನ್ನು ಆರಿಸಿಕೊಂಡು ತಿನ್ನುತ್ತಿದ್ದರು.

ನಾರಿನಿಂದ ಕೂಡಿದ ನಾಟಿ ಹುಳಿಮಾವಿನ ಕಾಯಿಯನ್ನು ಉಪ್ಪಿನ ಕಾಯಿಗೆ ಹೆಚ್ಚು ಬಳಸುವರು. ಬಲಿತ ಕಾಯಿಯನ್ನು ಹಣ್ಣು ಮಾಡುವರು. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿಯ ನಾಟಿ ಹುಳಿಮಾವಿನ ಕಾಯಿ ಕೋತಿಗಳಿಗೂ ಪ್ರಿಯ. ಅಧಿಕ ಇಳುವರಿ ನೀಡುವ ಕಸಿ  ಮಾವಿನ ಗಿಡದ ನಾಟಿ ಆರಂಭವಾದ ಬಳಿಕ, ನಾಟಿ ಹುಳಿ ಮಾವಿನ ಹಣ್ಣು ಮಹತ್ವ ಕಳೆದುಕೊಂಡಿತು. ಬೃಹತ್‌ ಗಾತ್ರದ  ಮರಗಳನ್ನು ರೈತರು ಕಡಿದರು. ರಸ್ತೆ ಬದಿಯ ಮರಗಳು ಪ್ರಭಾವಿಗಳು, ಮರಗಳ್ಳರ ಪಾಲಾದವು. ಗುಂಡು ತೋಪಿನ ಮರಗಳದ್ದೂ ಇದೇ ಸ್ಥಿತಿ. 

ADVERTISEMENT

ತಾಲ್ಲೂಕಿನ ಕೆಲವು ಕಡೆಗಳಲ್ಲಿ ನಾಟಿ ಹುಳಿ ಮಾವಿನ ಮರಗಳು ಇನ್ನೂ ಇವೆ. ಈ ಮರಗಳ ಕಾಯಿ, ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತಿದೆ. ಹೊಸ ತಲೆಮಾರಿನ ಜನರಿಗೆ ಈ ಮಾವಿನ ತಳಿಯ ಪರಿಚಯವೇ ಕಡಿಮೆ.

ತಾಲ್ಲೂಕಿನಲ್ಲಿ ಇತರ ಜಾತಿ ಮರ ಗಳು ತೇವಾಂಶದ ಕೊರತೆಯಿಂದ ಒಣ ಗುತ್ತಿವೆ. ನಾಟಿ ಹುಳಿ ಮಾವಿನ ಮರಗಳು ಮಾತ್ರ ಹಸಿರೆಲೆ ಹೊತ್ತು ನಳನಳಿಸುತ್ತಿವೆ. ಇದಕ್ಕೆ ಕಾರಣ ನೆಲ ದಾಳಕ್ಕೆ ಇಳಿದ ಬೇರು. ನಾಟಿ ತಳಿ ದೀರ್ಘ ಬಾಳುತ್ತದೆ ಮತ್ತು ಹಣ್ಣು ನೀಡುತ್ತದೆ.

‘ಹುಳಿ ಮಾವಿನ ಹಣ್ಣಿನ ರುಚಿಯೇ ಬೇರೆ. ನಾಟಿ ಮಾವಿನ ಮರದ ಹಲಗೆಗೆ ಹೆಚ್ಚಿನ ಬೇಡಿಕೆ ಇದೆ. ಈ ಬೇಡಿಕೆಯೇ ಈ ಮರದ ಅಳಿವಿಗೆ ಕಾರಣವಾಯಿತು. ಇಂದಿಗೆ ನಾಟಿ ಮಾವಿನ ಕಾಯಿ ಅಪ್ರಸ್ತುತವಾದರೂ, ಹಿರಿಯರಿಂದ ಬಂದ ತಳಿ ಕಣ್ಮರೆಯಾಗುವ ಮೊದಲು ಉಳಿಸಿಕೊಳ್ಳಬೇಕಾಗಿದೆ’ ಎನ್ನುವರು ಪರಿಸರವಾದಿ ರಾಂಪುರ ಅಶೋಕ್‌ ಕುಮಾರ್‌ ಮತ್ತು ರೋಣೂರು ಗ್ರಾಮದ ರೈತ ಮುನಿಯಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.