ADVERTISEMENT

ಬರ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘದಿಂದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:39 IST
Last Updated 2 ಫೆಬ್ರುವರಿ 2017, 6:39 IST
ಬರ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಬರ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ   
ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಐದಾರು ವರ್ಷದಿಂದ ನಿರಂತರ ಬರ ಆವರಿಸಿದ್ದು ಸರ್ಕಾರ ಕಾಟಾಚಾರಕ್ಕೆ ಬರಪೀಡಿತ ತಾಲ್ಲೂಕು ಎಂದು ಘೋಷಿಸಿದೆ. ಫಲಾನುಭವಿ ರೈತರಿಗೆ ಇದುವರೆಗೂ ನಯಾಪೈಸೆ ಬರ ಪರಿಹಾರ ಹಣ ವಿತರಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
 
ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿದರು. 
 
ಬರದಿಂದ ಕಂಗಾಲಾಗಿರುವ ರೈತರು, ಕೃಷಿಕಾರ್ಮಿಕರು, ನೀರಾವರಿ ಅವಲಂಬಿತ ರೈತರು, ಮಳೆಯಾಧರಿತ ಕೃಷಿ ಮಾಡುತ್ತಿರುವ ರೈತರು ಬೆಳೆನಷ್ಟದಿಂದ ಸಾಲಗಾರರಾಗಿ ಬೇರೆಡೆ ಗುಳೆ ಹೋಗುತ್ತಿದ್ದಾರೆ ಎಂದು ಸಂಘದ ತಾಲ್ಲೂಕು ಕಾರ್ಯದರ್ಶಿ ಮಂಜುನಾಥರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
 
ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಅಭಾವ ತಲೆದೋರಿದ್ದು ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ದೂಡುತ್ತಿದ್ದಾರೆ. ಅಧಿಕಾರಿಳು ಮತ್ತು ಜನಪ್ರತಿನಿಧಿಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ದೂರಿದರು.
 
ರೈತರ, ಕೂಲಿಕಾರರ ಎಲ್ಲಾ ರೀತಿಯ ಕೃಷಿ ಸಾಲಗಳನ್ನು ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ ಸಾಲಗಳನ್ನು ಮನ್ನಾ ಮಾಡಬೇಕು. ಬೆಳೆನಷ್ಟವಾಗಿರುವ ರೈತರಿಗೆ ಬೆಳೆನಷ್ಟ ಪರಿಹಾರವಾಗಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
 
ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಕ್ಷಣ ಗೋಶಾಲೆ ಪ್ರಾರಂಭಿಸಿ ಮೇವು, ನೀರಿನ ವ್ಯವಸ್ಥೆ ಒದಗಿಸಬೇಕು. ಅರ್ಹರಿಗೆ ಉಚಿತ ಪಡಿತರ ನೀಡಬೇಕು. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿಬಯಸುವ ಕೂಲಿಗಾರರಿಗೆ ಕನಿಷ್ಠ 200 ದಿನಗಳ ಕಾಲ ₹ 600 ರಂತೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಕಳೆದ ವರ್ಷ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿರುವ ಮಾಡಿದ್ದ ಟ್ರ್ಯಾಕ್ಟರ್‌ ಮಾಲೀಕ ರೈತರಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
 
ಕಂದಾಯ ಇಲಾಖೆ ನೀಡುತ್ತಿರುವ ಇನ್‌ಪುಟ್‌ ಸಬ್ಸಿಡಿಯನ್ನು ಉಳುಮೆ ಮಾಡುತ್ತಿರುವ ಎಲ್ಲಾ ರೈತರಿಗೆ ಕನಿಷ್ಠ ಎಕರೆಗೆ ₹10 ಸಾವಿರ ನೀಡಬೇಕು ಎಂದು ಬೇಡಿಕೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.