ADVERTISEMENT

ಬರ: ಪರಿಹಾರಕ್ಕೆ ರೈತಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 5:10 IST
Last Updated 18 ಸೆಪ್ಟೆಂಬರ್ 2014, 5:10 IST

ಚಿಂತಾಮಣಿ:  ಬರ ಎದುರಿಸುತ್ತಿರುವ ಜಿಲ್ಲೆ ಹಾಗೂ ತಾಲ್ಲೂಕಿಗೆ ವಿಶೇಷ ಅನುದಾನ ಬಿಡುಗಡೆಗೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆಯ ಮುಖಂ­ಡರು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಳೆ ಇಲ್ಲದೆ ಕೆರೆ, ಕುಂಟೆಗಳಲ್ಲಿ ನೀರಿಲ್ಲ. ಜಾನುವಾರುಗಳು ನೀರು ಹಾಗೂ ಮೇವಿಗಾಗಿ ಪರದಾಡುವಂತಾಗಿದೆ. ಬರಗಾಲದಿಂದ ಜನರು ಸಹ ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ.  ಮೇವಿಲ್ಲದೆ ಸಾಯುವಂತಹ ಪರಿಸ್ಥಿತಿ ಎದುರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆ­ಯಲ್ಲೇ ಇದ್ದಾರೆ ಎಂದು ಟೀಕಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗೋಶಾಲೆಗಳನ್ನು ತೆರೆಯಬೇಕು. ರೈತರ ಬೆಳೆ ವಿಮೆ ಯೋಜನೆ ಮಂಜೂರು ಮಾಡಬೇಕು. ರೈತರ ಅಕ್ರಮ, ಸಕ್ರಮ ವಿದ್ಯುತ್‌ ಯೋಜನೆಯನ್ನು ಕೈಬಿಟ್ಟು ಹಿಂದಿನಂತೆ  ಟ್ರಾನ್ಸ್‌ಫಾರಂ ನೀಡಬೇಕು ಎಂದರು.

ಆಹಾರ ಪಡಿತರ ಚೀಟಿಗಳ ಲೋಪದೋಷ ಸರಿಪಡಿಸಬೇಕು.  ಹಳ್ಳಿಯಲ್ಲೂ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಮನವಿ ಪತ್ರವನ್ನು ತಹಶೀಲ್ದಾರ್‌ ಹನುಮಂತರೆಡ್ಡಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ರೈತ ಮುಖಂಡರಾದ ವೆಂಕಟಸುಬ್ಬಾರೆಡ್ಡಿ, ಆಂಜನೇಯರೆಡ್ಡಿ, ವೆಂಕಟಾಚಲಪತಿ, ಕೊಂಡಪ್ಪ, ರೆಡ್ಡಪ್ಪ, ನಾಗರಾಜು, ಹನುಮಂತಪ್ಪ, ಮುನಿವೆಂಕಟಪ್ಪ, ಗಿಡ್ಡೇಗೌಡ, ನರಸಿಂಹಮೂರ್ತಿ, ಕೆ.ಎಂ.ವೆಂಕಟೇಶಪ್ಪ, ಮಂಜುನಾಥ್‌, ಬಿ.ಎಂ.ಮುನಿವೆಂಕಟಪ್ಪ, ವೈ.ವಿ.ಶಂಕರರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT