ADVERTISEMENT

ಬಸ್‌ ಪಾಸ್‌ ಮಾನ್ಯತೆಗೆ ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 8:51 IST
Last Updated 8 ಸೆಪ್ಟೆಂಬರ್ 2017, 8:51 IST
ಚಿಕ್ಕಬಳ್ಳಾಪುರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಸಾರಿಗೆ ಸಂಸ್ಥೆ ಘಟಕದ ಕಾರ್ಮಿಕ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಸಾರಿಗೆ ಸಂಸ್ಥೆ ಘಟಕದ ಕಾರ್ಮಿಕ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಅಂತರ ರಾಜ್ಯ ಬಸ್‌ಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಬಸ್‌ ಪಾಸ್‌ಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದ ಕಾರ್ಮಿಕ ಸಂಘದ ಪದಾಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ, ‘ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಇಂದಿಗೂ ಸರಿಯಾಗಿ ಬಸ್‌ ಸಂಚಾರ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ನಗರಗಳಿಗೆ ಉನ್ನತ ವ್ಯಾಸಂಗಕ್ಕೆ ಹೋಗಲು ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲೆಯ ಮೂಲಕ ಆಂಧ್ರಪ್ರದೇಶ ಮತ್ತು ಬೆಂಗಳೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಬಸ್‌ ಪಾಸ್ ಬಳಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಬಸ್‌ ಗಳ ಕೊರತೆಯಿಂದಾಗಿ ನಗರಗಳಿಗೆ ಓದಲು ತೆರಳುವ ವಿದ್ಯಾರ್ಥಿನಿಯರು ತೀವ್ರ ತೊಂದರೆ, ಕಿರುಕುಳ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಬರಗಾಲ ಕಾಣಿಸಿಕೊಂಡಿರುವ ಕಾರಣ ಪೋಷಕರ ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿಲ್ಲ. ಆದ್ದರಿಂದ ಅಂತರರಾಜ್ಯ ಬಸ್‌ಗಳಲ್ಲಿ ವಿದ್ಯಾರ್ಥಿಗಳು ದುಡ್ಡು ಕೊಟ್ಟು ಪ್ರಯಾಣಿಸುವುದು ಕಷ್ಟ. ಆದ್ದರಿಂದ ಎಲ್ಲಾ ಬಗೆಯ ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ಗೆ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಾರಿಗೆ ಸಂಸ್ಥೆ ಚಿಕ್ಕಬಳ್ಳಾಪುರ ವಿಭಾಗಕ್ಕೆ ವಿಚಾರಣಾ ನಿರ್ಣಯ ಅಧಿಕಾರಿಯನ್ನಾಗಿ ನೇಮಕ ಮಾಡಿರುವ ರಫೀವುಲ್ಲಾ ಖಾನ್‌ ಅವರು ಆಡಳಿತದಲ್ಲಿ ಕೇವಲ ಇಂಗ್ಲಿಷ್‌ ಬಳಕೆ ಮಾಡುತ್ತಿದ್ದಾರೆ. ಇದರಿಂದ ಕೆಳಹಂತದ ಕಾರ್ಮಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಕನ್ನಡ ಬಲ್ಲ ಅಧಿಕಾರಿಯನ್ನು ಆ ಹುದ್ದೆಗೆ ನಿಯೋಜಿಸಬೇಕು’ ಎಂದು ಹೇಳಿದರು. ಮುಖಂಡರಾದ ಅಂಬರೀಷ್‌, ಇನಾಯತುಲ್ಲಾ, ರೇಣುಕಮ್ಮ, ದೇವರಾಜು, ನಂದಿ ಪುರುಷೋತ್ತಮ್, ಮಂಜುನಾಥ್, ಮುಬಾರಕ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.