ADVERTISEMENT

ಬಿರುಸಿನ ಮಳೆ; ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 10:08 IST
Last Updated 11 ಸೆಪ್ಟೆಂಬರ್ 2017, 10:08 IST

ಚಿಂತಾಮಣಿ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಬಿರುಸಿನ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದವು. ತಗ್ಗುಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡಿದರು.

ಕಳೆದ ವಾರದಿಂದ ನಗರದಲ್ಲಿ ಅಲ್ಪ–ಸ್ವಲ್ಪ ಮಳೆ ಬೀಳುತ್ತಿತ್ತು. ಅಬ್ಬರದ ಮಳೆ ಸುರಿದಿದ್ದರಿಂದ ಕೆಲವೆಡೆ ಜನರು ರಾತ್ರಿಯಿಡೀ ನೀರಿನಲ್ಲೇ ಕಾಲ ಕಳೆಯಬೇಕಾಯಿತು. ಚರಂಡಿಗಳಲ್ಲಿ ಕಸಕಡ್ಡಿ ತುಂಬಿದ್ದು, ಸರಾಗವಾಹಿ ನೀರು ಹರಿದು ಹೋಗದೆ ರಸ್ತೆಗಳಿಗೆ ನುಗ್ಗಿತ್ತು. ಕೆಲವು ವಾರ್ಡ್‌ಗಳ ಮನೆಗಳಿಗೂ ಕೊಳಚೆ ನೀರು ರಸ್ತೆಗಳಿಗೆ ಹರಿದಿತ್ತು.

ನಗರದಲ್ಲಿ ಶನಿವಾರ 54 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಮುರುಗಮಲ್ಲ ವ್ಯಾಪ್ತಿಯಲ್ಲಿ 30.6 ಮಿ.ಮೀ, ಕೆಂಚಾರ್ಲಹಳ್ಳಿ ವ್ಯಾಪ್ತಿಯಲ್ಲಿ 25ಮಿ.ಮೀ ಮಳೆಯಾಗಿದೆ. ಬುರುಡಗುಂಟೆ, ಬಟ್ಲಹಳ್ಳಿ, ಇರಗಂಪಲ್ಲಿ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ತಾಲ್ಲೂಕಿನಲ್ಲಿ ಸರಾಸರಿ 16.13 ಮಿ.ಮೀ ಮಳೆಯಾಗಿದೆ.

ADVERTISEMENT

ಸ್ಮಶಾನದ ಗೋಡೆ ಕುಸಿತ: ನಗರದ ಸೊಣ್ಣಶೆಟ್ಟಿಹಳ್ಳಿಯ ಸ್ಮಶಾನದ ಆವರಣದ ಗೋಡೆ ಬಿದ್ದುಹೋಗಿ ನೀರು ಸ್ಮಶಾನಕ್ಕೆ ನುಗ್ಗಿತ್ತು. ಚರಂಡಿಗಳ ಒತ್ತುವರಿ, ಕಸಕಡ್ಡಿ ತುಂಬಿಕೊಂಡಿದ್ದರಿಂದ ನೀರು ತಗ್ಗುಪ್ರದೇಶವಾದ ಸ್ಮಶಾನಕ್ಕೆ ನುಗ್ಗಿದೆ.

ಕೆಳ ಸೇತುವೆಯಲ್ಲಿ ನೀರು: ನಗರದಿಂದ ಚೇಳೂರು, ಮುರುಗಮಲ್ಲ ಕಡೆಗೆ ಹೋಗುವ ರಸ್ತೆಯಲ್ಲಿರುವ ರೈಲ್ವೆ ಅಂಡರ್‌ಪಾಸ ಸಂಪೂರ್ಣ ಕೆರೆಯಾಗಿತ್ತು. ನೀರಿನಲ್ಲಿ ಸಿಲುಕಿದ ವಾಹನಗಳು 3–4 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೆಳ ಸೇತುವೆ ಅವೈಜ್ಞಾನಿಕ ನಿರ್ಮಾಣದಿಂದ ಮಳೆ ಬಂದಾಗ ವಾಹನ ಸವಾರರಿಗೆ ತೊಂದರೆಯಾಯಿತು.

ಹೆದ್ದಾರಿ ಬಂದ್‌: ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ತಿಮ್ಮಸಂದ್ರದ ಬಳಿ ರಸ್ತೆ ಕೊಚ್ಚಿಕೊಂಡು ಹೋಗಿ ಸಂಪರ್ಕವೇ ಕಡಿದುಹೋಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಅಂಬಾಜಿದುರ್ಗ ಬೆಟ್ಟದಿಂದ ಹರಿದು ಬಂದ ನೀರಿನಿಂದ ಮೋರಿಯ ಬಳಿ ರಸ್ತೆ ಕೊಚ್ಚಿಹೋಗಿತ್ತು.

ಮನೆಗಳಿಗೆ ನೀರು: ನಗರದ ಅಂಜನಿ ಬಡಾವಣೆಯ ಕಿಶೋರ ವಿದ್ಯಾಭವನದ ಮುಂದಿನ ಕೆಲವು ತಗ್ಗುಪ್ರದೇಶದ ಮನೆಗಳಿಗೆ ಮತ್ತು ಪಂಪ್‌ಹೌಸ್‌ಗೆ ನೀರು ನುಗ್ಗಿತ್ತು. ಜನರು ನಗರಸಭೆಗೆ ಹಿಡಿಶಾಪ ಹಾಕುತ್ತಾ ನೀರನ್ನು ಹೊರ ಹಾಕಿದರು.

ಟ್ಯಾಂಕ್‌ ಬಂಡ್‌ ರಸ್ತೆ ಸೇರಿದಂತೆ ಇತರೆ ಹಲವಾರು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಜನರು ನೀರಿನಲ್ಲೇ ಕಾಲ ಕಳೆಯುವಂತಾಯಿತು. ಚರಂಡಿಗಳ ಒತ್ತುವರಿಯನ್ನು ತೆರವುಗೊಳಿಸುವುದು ಹಾಗೂ ಕಸಕಡ್ಡಿಗಳಿಂದ ತುಂಬಿಕೊಂಡಿರುವ ಚರಂಡಿ ಸ್ವಚ್ಚಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ನಗರಸಭೆಯ ಅಧ್ಯಕ್ಷೆ ಸುಜಾತಾ ಶಿವಣ್ಣ ನಗರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸೂಕ್ತಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.