ADVERTISEMENT

ಬೀದಿ ಕಾಮಣ್ಣರು, ಇಲಿ ಹೆಗ್ಗಣಗಳ ಕಾಟ...

ಹಾಸ್ಟೆಲ್‌ಗಳಿಗೆ ಗ್ರಹಣ

ಜೆ.ಆರ್.ಗಿರೀಶ್
Published 13 ಜನವರಿ 2017, 9:50 IST
Last Updated 13 ಜನವರಿ 2017, 9:50 IST
ಕೋಲಾರ: ರಾತ್ರಿಯಾದರೆ ರಾಜಾರೋಷವಾಗಿ ಒಳ ನುಗ್ಗುವ ಬೀದಿ ಕಾಮಣ್ಣರು... ಆಗಾಗ್ಗೆ ಉರಗಗಳ ದರ್ಶನ... ಜತೆಗೆ ಇಲಿ ಹೆಗ್ಗಣ ತಿಗಣೆ ಕಾಟ.... ಋತುಸ್ರಾವದ ಸಂದರ್ಭದಲ್ಲಿ ನೀರಿನ ಸಮಸ್ಯೆಯಿಂದಾಗಿ ಪಡಿಪಾಟಲು.
 
ಶಿಥಿಲ ಕಟ್ಟಡಗಳು, ಮಳೆ ಬಂದರೆ ಸೋರುವ ಸೂರು, ಬಣ್ಣ ಕಾಣದ ಗೋಡೆಗಳು, ಕೊರೆವ ಚಳಿಯಲ್ಲೂ ತಣ್ಣೀರ ಸ್ನಾನ, ವಾರದಲ್ಲಿ ಮೂರ್ನಾಲ್ಕು ಬಾರಿ ಒಂದೇ ತಿಂಡಿ, ತುಕ್ಕು ಹಿಡಿದ ಪಾತ್ರೆಗಳು.
 
– ಹೀಗೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
 
ಜಿಲ್ಲೆಯಲ್ಲಿ 13 ಮೆಟ್ರಿಕ್‌ ಪೂರ್ವ ಹಂತದ ಬಾಲಕಿಯರ ವಿದ್ಯಾರ್ಥಿನಿಲಯಗಳು, 6 ಮೆಟ್ರಿಕ್‌ ನಂತರದ ಹಾಗೂ ಒಂದು ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯವಿದೆ. ಒಟ್ಟಾರೆ 1,587 ವಿದ್ಯಾರ್ಥಿನಿಯರ ಪ್ರವೇಶಾತಿಗೆ ಮಂಜೂರಾತಿ ಇದ್ದು, 960 ವಿದ್ಯಾರ್ಥಿನಿಯರು ಮಾತ್ರ ಪ್ರವೇಶ ಪಡೆದಿದ್ದಾರೆ.
 
16 ವಿದ್ಯಾರ್ಥಿನಿಲಯಗಳು ಸ್ವಂತ ಕಟ್ಟಡದಲ್ಲಿ ಮತ್ತು 4 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಬಹುತೇಕ ವಿದ್ಯಾರ್ಥಿನಿಲಯದ ಕಟ್ಟಡಗಳು ತುಂಬಾ ಹಳೆಯವಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ಕಟ್ಟಡದಲ್ಲಿನ ಶೌಚಾಲಯ ಮತ್ತು ಸ್ನಾನದ ಕೋಣೆಯ ಬಾಗಿಲುಗಳು ಹಾಳಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲದೇ, ಕಿಟಕಿಗಳ ಗಾಜು ಒಡೆದು ಹೋಗಿ ವರ್ಷಗಳೇ ಕಳೆದಿವೆ.
 
ಸ್ನಾನಕ್ಕೆ ನೀರಿಲ್ಲ: ಬಹುಪಾಲು ಹಾಸ್ಟೆಲ್‌ಗಳಲ್ಲಿ ಸೌರಶಕ್ತಿಯಿಂದ ನೀರು ಕಾಯಿಸುವ ಉಪಕರಣಗಳು ಕೆಟ್ಟು ಹೋಗಿವೆ. ಹೀಗಾಗಿ ವಿದ್ಯಾರ್ಥಿನಿಯರಿಗೆ ಸ್ನಾನಕ್ಕೆ ಬಿಸಿ ನೀರು ಕೊಡುತ್ತಿಲ್ಲ. ಕೆಲ ವಿದ್ಯಾರ್ಥಿನಿಲಯಗಳ ಕೊಳವೆ ಬಾವಿಗಳಲ್ಲಿ ನೀರು ಬತ್ತಿರುವುದರಿಂದ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತಿಂಗಳಿಗೆ ಗರಿಷ್ಠ 2 ಟ್ಯಾಂಕರ್‌ ನೀರು ಕೊಡುತ್ತಿದ್ದು, ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವ ಹಾಸ್ಟೆಲ್‌ಗಳಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ.
 
‘ಋತುಸ್ರಾವದ ವೇಳೆ ವಿದ್ಯಾರ್ಥಿನಿಲಯದಲ್ಲಿ ಸ್ನಾನಕ್ಕೆ ನೀರಿಲ್ಲದ ಕಾರಣ ಹಾಸ್ಟೆಲ್‌ ತೊರೆದು ಮೂರ್‌್್ನಾಲ್ಕು ದಿನ ಮನೆಗೆ ಹೋಗುತ್ತೇವೆ. ಅಡುಗೆ ಕೆಲಸಗಾರರು ಎರಡು ಮೂರು ಕಿಲೋ ಮೀಟರ್‌ ದೂರದಿಂದ ನೀರು ತಂದು ಅಡುಗೆ ಮಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಘಟಕಗಳು ಕೆಟ್ಟಿದ್ದು, ಅಧಿಕಾರಿಗಳು ಅವುಗಳ ದುರಸ್ತಿಗೆ ಮನಸು ಮಾಡಿಲ್ಲ’ ಎಂದು ಜಿಲ್ಲಾ ಕೇಂದ್ರದಲ್ಲಿನ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.
 
ಸಿಬ್ಬಂದಿ ಇಲ್ಲ: 50 ವಿದ್ಯಾರ್ಥಿನಿಯರ ದಾಖಲಾತಿ ಇರುವ ಹಾಸ್ಟೆಲ್‌ಗೆ ಒಬ್ಬರು ಮಹಿಳಾ ವಾರ್ಡನ್‌ ಅಥವಾ ಮೇಲ್ವಿಚಾರಕಿ, ಇಬ್ಬರು ಅಡುಗೆ ಸಿಬ್ಬಂದಿ, ಒಬ್ಬರು ಅಡುಗೆ ಸಹಾಯಕಿ ಮತ್ತು ಕಾವಲುಗಾರ ಇರಬೇಕೆಂಬ ನಿಯಮವಿದೆ. ಆದರೆ, 20 ವಿದ್ಯಾರ್ಥಿನಿಲಯಗಳ ಪೈಕಿ 3 ಕಡೆ ಮಾತ್ರ ಕಾಯಂ ವಾರ್ಡನ್‌ಗಳಿದ್ದಾರೆ. ಈ ವಾರ್ಡನ್‌ಗಳಿಗೆ ಹಾಗೂ ಅಡುಗೆ ಸಿಬ್ಬಂದಿಗೆ ಉಳಿದ 17 ಹಾಸ್ಟೆಲ್‌ಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
 
ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ಕಾಯಂ ಸಿಬ್ಬಂದಿಯಲ್ಲ. ಬದಲಿಗೆ ದಿನಗೂಲಿ ನೌಕರರು. ಹಲವೆಡೆ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಖ್ಯಸ್ಥರಾದ ಜಂಟಿ ನಿರ್ದೇಶಕರ ಹುದ್ದೆ ಹಾಗೂ ಐದೂ ತಾಲ್ಲೂಕುಗಳಲ್ಲಿನ ಸಹಾಯಕ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಶಿಕ್ಷಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ. ಸಿಬ್ಬಂದಿ ಸಮಸ್ಯೆಯಿಂದ ಹಾಸ್ಟೆಲ್‌ಗಳ ಹಾಗೂ ಇಲಾಖೆಯ ಆಡಳಿತ ಹಳಿ ತಪ್ಪಿದೆ.
 
ಹಾಸಿಗೆ– ದಿಂಬಿಲ್ಲ: ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವ ಕಡೆ  8ರಿಂದ 10 ಮಂದಿಯನ್ನು ಒಂದೇ ಕೊಠಡಿಯಲ್ಲಿ ಇರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಮಂಚ, ಹಾಸಿಗೆ, ದಿಂಬು ಕೊಟ್ಟಿಲ್ಲ. ಹೀಗಾಗಿ ನೆಲದ ಮೇಲೆ ಚಾಪೆ ಹಾಕಿಕೊಂಡು ಮಲಗುವ ಪರಿಸ್ಥಿತಿ ಇದೆ. ಜನರೇಟರ್‌, ಯುಪಿಎಸ್‌ ಸೌಲಭ್ಯವಿದ್ದರೂ ಬಳಕೆಯಾಗುತ್ತಿಲ್ಲ. ವಿದ್ಯುತ್‌ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಗೋಳು ಹೇಳತೀರದು. ಇಲಾಖೆಯ ನಿಯಮದ ಪ್ರಕಾರ ಬೆಳಗಿನ ಉಪಾಹಾರಕ್ಕೆ ವಾರದಲ್ಲಿ ಒಂದು ಬಾರಿ ದೋಸೆ, ಇಡ್ಲಿ, ಚಟ್ನಿ ಕೊಡಬೇಕು.
 
ಆದರೆ, ಗ್ರೈಂಡರ್‌ ಇಲ್ಲದ ಕಾರಣ ಈ ತಿಂಡಿಗಳು ಖೋತಾ ಆಗಿವೆ. ಬದಲಿಗೆ ಚಿತ್ರಾನ್ನ, ಟೊಮೆಟೊ ಬಾತ್‌ ತಿಂಡಿಯನ್ನೇ ಪದೇ ಪದೇ ಮಾಡಲಾಗುತ್ತಿದೆ.  ಇಡ್ಲಿ ತಟ್ಟೆ, ದೋಸೆ ಹೆಂಚುಗಳು ಹಾಸ್ಟೆಲ್‌ ಉಗ್ರಾಣದ ಮೂಲೆ ಸೇರಿವೆ. ಹಾಸ್ಟೆಲ್‌ಗಳಿಗೆ ಮಂಜೂರಾಗಿರುವ ಕ್ರೀಡಾ ಸಲಕರಣೆಗಳನ್ನು ಬಳಸುವ ಯೋಗ ಕೂಡಿ ಬಂದಿಲ್ಲ.
 
ಬಯೋಮೆಟ್ರಿಕ್‌ ಸ್ಥಗಿತ: ವಾರಾಂತ್ಯ ಅಥವಾ ಸರ್ಕಾರ ರಜಾ ದಿನಗಳಲ್ಲಿ ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಮನೆಗೆ ಕಳುಹಿಸಿ ಸುಳ್ಳು ಹಾಜರಾತಿ ತೋರಿಸುವ ಮೂಲಕ ಆಹಾರ ಪದಾರ್ಥಗಳ ಖರೀದಿಯಲ್ಲಿ ಅಕ್ರಮ ಎಸಗುತ್ತಿರುವ ಸಿಬ್ಬಂದಿ ಸಂಖ್ಯೆಯೇನು ಕಡಿಮೆ ಇಲ್ಲ.
 
ಹಾಜರಾತಿ ದಾಖಲಿಸುವ ಉದ್ದೇಶಕ್ಕಾಗಿ ಜಾರಿಗೊಳಿಸಿದ ಬಯೋಮೆಟ್ರಿಕ್‌  ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ಹಾಸ್ಟೆಲ್‌ ಸಿಬ್ಬಂದಿ ಕೊಡುವ ಕೃಷ್ಣನ ಲೆಕ್ಕವೇ ಈಗ ಅಧಿಕೃತವಾಗಿದೆ.
 
**
ಬ್ರಹ್ಮಾಂಡ ಭ್ರಷ್ಟಾಚಾರ
ಕೋಲಾರ: ಹಾಸ್ಟೆಲ್‌ಗಳಿಗೆ ಆಹಾರ ಪದಾರ್ಥ, ಮತ್ತಿತರ ವಸ್ತುಗಳ ಖರೀದಿಯಲ್ಲಿ ಸುಮಾರು ₹ 1.06 ಕೋಟಿ ಅಕ್ರಮ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಜಿಲ್ಲೆಯ 76 ಹಾಸ್ಟೆಲ್‌ಗಳ ಮೇಲೆ 2016ರ ನ.5ರಂದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಮಾಡಿತ್ತು.
 
ಪರಿಶೀಲನೆ ವೇಳೆ ಅಕ್ರಮದ ಆರೋಪ ಸಾಬೀತಾದ ಕಾರಣ  ಜಿಲ್ಲೆಯ ಐದೂ ತಾಲ್ಲೂಕುಗಳ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಲಾಗಿದೆ.
 
**
ಮಕ್ಕಳಲ್ಲಿ ಅಸುರಕ್ಷಿತ ಭಾವನೆ
ಕೆಲ ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಯುವತಿಯಂತೆ ಉಡುಪು ತೊಟ್ಟು ರಾತ್ರಿ ವೇಳೆ ಮಾಲೂರು ತಾಲ್ಲೂಕು ಕೇಂದ್ರದಲ್ಲಿನ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಿಸಿದ್ದ. ಅಲ್ಲದೇ, ವಿದ್ಯಾರ್ಥಿನಿಯರ ಮಧ್ಯೆ ಮಲಗಿ ಬೆಳಗಿನ ಜಾವ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ. ಈ ಘಟನೆ ನಂತರ ಹಾಸ್ಟೆಲ್‌ಅನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. 
 
ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಹಾಸ್ಟೆಲ್‌ಗಳು ಸುರಕ್ಷಿತವಲ್ಲ ಎಂಬ ಆತಂಕ ವಿದ್ಯಾರ್ಥಿನಿಯರಲ್ಲಿ ಮನೆ ಮಾಡಿದೆ.
 
**
* ಸೂಕ್ತ ಊಟವಿಲ್ಲದೆ ವಿದ್ಯಾರ್ಥಿಗಳ ಪರದಾಟ
* ನೇಮಕವಾಗದ ಭದ್ರತಾ ಸಿಬ್ಬಂದಿ
* ಬಯೋಮೆಟ್ರಿಕ್‌ ವ್ಯವಸ್ಥೆ ಸ್ಥಗಿತ
* ತಪ್ಪು ಲೆಕ್ಕ ತೋರಿಸುವ ಅಧಿಕಾರಿಗಳು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.