ADVERTISEMENT

ಭಾಷಾ ಸಾಮರಸ್ಯದ ನೆಲೆ ಗೌರಿಬಿದನೂರು

ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 13:27 IST
Last Updated 13 ಫೆಬ್ರುವರಿ 2017, 13:27 IST
ಗೌರಿಬಿದನೂರಿನಲ್ಲಿ ಭಾನುವಾರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಂಪ ಪುರಸ್ಕೃತ ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ ಹಾಗೂ ಪತ್ನಿ ಕಮಲಾ ಹಂಪನಾ ಅವರನ್ನು ಸನ್ಮಾನಿಸಲಾಯಿತು
ಗೌರಿಬಿದನೂರಿನಲ್ಲಿ ಭಾನುವಾರ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಂಪ ಪುರಸ್ಕೃತ ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ ಹಾಗೂ ಪತ್ನಿ ಕಮಲಾ ಹಂಪನಾ ಅವರನ್ನು ಸನ್ಮಾನಿಸಲಾಯಿತು   

ಗೌರಿಬಿದನೂರು: ತಾಲ್ಲೂಕು ಆಂಧ್ರ ಗಡಿ ಪ್ರದೇಶದಲ್ಲಿದ್ದರೂ ಕನ್ನಡಿಗರಿಗೂ ಮತ್ತು ಆಂಧ್ರ ಪ್ರದೇಶದ ಜನರಿಗೂ ಭಾಷಾ ವಿಚಾರದಲ್ಲಿ ಅಪಸ್ವರವಿಲ್ಲದೆ ಸಾಮರಸ್ಯದಿಂದ ಕೂಡಿರುವ ಏಕೈಕ ಪ್ರದೇಶವಾಗಿದೆ ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಎಚ್.ಎನ್. ಕಲಾಭವನದಲ್ಲಿ ಪುರಸಭೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೌರ ಸನ್ಮಾನ ಸ್ವೀರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕಳೆದ ಮೂವತ್ತು ವರ್ಷಗಳ ಹಿಂದೆ ತೆರೆದ ಭಾವಿಗಳಲ್ಲಿ ಯಥೇಚ್ಚವಾಗಿ ನೀರು ತುಂಬಿ ತುಳುಕುತ್ತಿದ್ದವು. ನದಿ, ಹಳ್ಳಗಳು ಸಮೃದ್ಧವಾಗಿ ಹರಿಯುತ್ತಿತ್ತು.

ಒಂದು ಬಾವಿಯಲ್ಲಿ ಎರಡು ಮೂರು ಮೋಟಾರ್‌ಗಳು ಅಳವಡಿಸಿ, ನೀರು ಹೊಡೆದರು ನೀರು ಖಾಲಿಯಾಗುತ್ತಿರಲ್ಲಿಲ್ಲ. ಆದರೆ ಇಂದು ಅಂತರ್ಜಲ ಕುಸಿದು, ಕುಡಿಯುವ ನೀರಿಗಾಗಿ ಈ ಭಾಗದ ಜನರು ಪರಿತಪಿಸುವಂತಾಗಿದೆ. ಆ ಹಿಂದಿನ ದಿನಗಳು ಮತ್ತೆ ಮರುಕಳುಹಿಸಲು ಸಾಧ್ಯವೇ ಎಂದರು. ಇದೇ ತಾಲ್ಲೂಕಿನ ಡಾ.ಎಚ್. ನರಸಿಂಹಯ್ಯ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ತಾಲ್ಲೂಕಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ವಿಜ್ಞಾನ ತಂತ್ರಜ್ಞಾನದ ಸಂಶೋಧನೆಯಿಂದ ದೇಶ ಅಭಿವೃದ್ಧಿಗೊಳ್ಳುತ್ತಿದೆ. ಅಹಂಕಾರಿ ಅಪಾಯಕಾರಿ ಮತ್ತೊಂದು ಇಲ್ಲ. ಸತಿಪತಿ, ಕುಟುಂಬ ಸಮಾಜ ಎಲ್ಲವೂ  ಸದುದ್ದೇಶಗಳನ್ನು ಒಳಗೊಳ್ಳುವ ಮೂಲಕ ದೇಶ ಒಂದಾಗಲು ಸಾಧ್ಯ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎರಡೂವರೆ ವರ್ಷ ಇತಿಹಾಸವಿರುವ ಕನ್ನಡ ಭಾಷೆಯ ಅಭಿವೃದ್ಧಿಗೆ ಹಂಪ ನಾಗರಾಜಯ್ಯ ಹಾಗೂ ಪತ್ನಿ ಕಮಲಾ ಹಂಪನಾ ಇಬ್ಬರು ರಾಷ್ಟ್ರ ಮಟ್ಟದಲ್ಲಿ ದುಡಿಯುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಪತಿ– ಪತ್ನಿ ಇಬ್ಬರು ತೊಡಗಿಸಿಕೊಂಡಿರುವುದು ಬಹಳ ವಿರಳ ಎಂದು ಹೇಳಿದರು.

ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ತಾಲ್ಲೂಕಿನ ಬಸವಾರಾಧ್ಯ, ಎಲ್.ಬಸವರಾಜು, ಡಾ.ಎಚ್.ನರಸಿಂಹಯ್ಯ, ರುದ್ರ ಕವಿ, ಪುಲ್ಲಕವಿ ಮತ್ತಿತರ ಅನೇಕ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಶ್ರೇಷ್ಠ ಪ್ರಶಸ್ತಿಯಾದ ಪಂಪ ಪ್ರಶಸ್ತಿ ನಮ್ಮ ತಾಲ್ಲೂಕಿನ ಹಂಪ ನಾಗರಾಜಯ್ಯ, ಎಲ್.ಬಸವರಾಜು ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

‘ನಮ್ಮ ಜನ ನಮ್ಮ ಹೆಮ್ಮೆ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ವಿವಿಧ ಇಲಾಖೆ ಹಾಗೂ ಸಂಘಟನೆಗಳ ಮುಖಂಡರು ಹಂಪ ನಾಗರಾಜಯ್ಯ ಅವರಿಗೆ ಅಭಿನಂದೆನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಾ, ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ, ಕಾ.ನಾ.ಶ್ರೀನಿವಾಸ್, ಸಾಹಿತಿ ಶ್ರೀನಿವಾಸಮೂರ್ತಿ, ತಹಶೀಲ್ದಾರ್ ಎಂ.ನಾಗರಾಜು, ಪುರಸಭೆ ಅಧ್ಯಕ್ಷ ಕಲಿಂಉಲ್ಲಾ, ಉಪಾಧ್ಯಕ್ಷ ಗೋಪಿನಾಥ್, ಮುಖ್ಯಾಧಿಕಾರಿ ಹನುಮಂತೇಗೌಡ, ಪುರಸಭೆ ಸದಸ್ಯ ಜಿ.ಬಾಲಾಜಿ, ಗೀತಾ ಜಯಂಧರ್, ಪ್ರಕಾಶರ್ ರೆಡ್ಡಿ, ಮರಳೂರು ಹನುಮಂತರೆಡ್ಡಿ, ಡಾ.ಕೆ.ಪಿ.ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.