ADVERTISEMENT

ಭೂಮಿ ಉಳಿಸಲು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 10:02 IST
Last Updated 6 ಅಕ್ಟೋಬರ್ 2015, 10:02 IST

ಗೌರಿಬಿದನೂರು: ತಾಲ್ಲೂಕಿನ ಹೊಸಕೋಟೆ ಗ್ರಾಮದ ಸಮೀಪ ಅರಣ್ಯ ಭೂಮಿ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು.

ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಎನ್.ಆರ್.ರವಿಚಂದ್ರಾ ರೆಡ್ಡಿ ಮಾತನಾಡಿ, ಹೊಸೂರು ಹೋಬಳಿ ಹೊಸಕೋಟೆ ಗ್ರಾಮದ ಸಮೀಪ 40 ವರ್ಷದಿಂದ ಸುಮಾರು 350 ರೈತರು ಬೇಸಾಯ ಮಾಡುತ್ತಿದ್ದಾರೆ ಎಂದರು.

1988ರಲ್ಲಿಯೇ ನಮೂನೆ 53ರ ಅಡಿ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದರೂ ತಾಲ್ಲೂಕು ಆಡಳಿತ ಭೂಮಿ ಮಂಜೂರು ಮಾಡಿಲ್ಲ. ಬೇಸಾಯ ನಡೆಯುತ್ತಿರುವ ಸ್ಥಳದಲ್ಲಿ ವಿಜ್ಞಾನ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿ, ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.

ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ ಮಾತನಾಡಿ,  ಕಳೆದ ಸೆ.1ರಂದು ನಡೆದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಿದ್ದ ತಹಶೀಲ್ದಾರ್, ಸೆ.14ರಂದು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು.

ತಹಶೀಲ್ದಾರ್ ಡಾ.ಎನ್.ಭಾಸ್ಕರ್ ಮನವಿ ಸ್ವೀಕರಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಎನ್.ರಾಜು, ಅನ್ವರ್ ಬಾಷಾ, ಚಿಕ್ಕನಾಯ್ಡು, ಗಂಗಾಧರಪ್ಪ, ಮಂಜುನಾಥ್, ಬುಡೇನ್, ಶಿಲ್ಪಾ, ಲಕ್ಷ್ಮಿದೇವಮ್ಮ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.