ADVERTISEMENT

‘ಮಕ್ಕಳಿಗೆ ಬದುಕು ಕಟ್ಟಿಕೊಡುವ ಶಿಕ್ಷಣ ನೀಡಿ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:47 IST
Last Updated 9 ಜನವರಿ 2017, 9:47 IST
ನರಸಿಂಹರಾಜಪುರ: ಪೋಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿ ಕೊಂಡು ಅವರ ಬದುಕನ್ನು ಕಟ್ಟಿಕೊಡುವ ಶಿಕ್ಷಣ ನೀಡಲು ಆದ್ಯತೆ ನೀಡಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಹೇಳಿದರು.
 
ಪಟ್ಟಣದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಈಚೆಗೆ ನಡೆದ ಸ್ಪಂದನ ಶಿಕ್ಷಣ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಶಿಕ್ಷಣ ಎಂಬುದು ನಾಲ್ಕು ಗೋಡೆಯೊಳಗಿನ ವಿಚಾರಕ್ಕೆ ಸೀಮಿತವಾಗದೆ. ಮಕ್ಕಳಿಗೆ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸುವಂತಿರ ಬೇಕು. ಮಕ್ಕಳ ಅಂತರಂಗ, ಬಹಿರಂಗವನ್ನು ಜಾಗೃತಿಗೊಳಿಸಬೇಕು. ಪಠ್ಯಚಟುವಟಿಕೆ ಮತ್ತು ಪಠ್ಯೇತರ ಚಟುವಟಿಕೆ ಒಂದ ಕ್ಕೊಂದು ಪೂರಕವಾಗಿದ್ದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಸ್ತುತ ಮಕ್ಕಳು ತಾಂತ್ರಿಕ ಜಗತ್ತಿನೊಳಗೆ ಲೀನವಾಗುತ್ತಿದ್ದು ಇದರಿಂದ ಹೊರ ಬಂದು ಭೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾದರೆ ಪೋಷಕರು ಮಾನವೀಯ ಮೌಲ್ಯ,ಪ್ರೀತಿ,ಪ್ರೇಮ, ಸೌಹಾರ್ದತೆಯನ್ನು ಬೆಳೆಸಬೇಕು ಎಂದರು.
 
ಸಮಾಜದ ಏರಿಳಿತಗಳು, ಕುಟುಂಬದ ಸಮಸ್ಯೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಸರಳ, ವೈರಾಗ್ಯತೆ,ಆಪ್ತತೆ ವೃದ್ಧಿಗೊಳಿಸಬೇಕು. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸದಿದ್ದರೆ ಮಕ್ಕಳು ಪೋಷಕರಿಂದ ದೂರವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
 
ಸಂಸ್ಥೆಯ ಅಧ್ಯಕ್ಷ ಹಾತೂರು ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ,  7ವರ್ಷಗಳ ಹಿಂದೆ 16 ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲಿ ಪ್ರಸ್ತುತ 140ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದ ಅವರು ಪ್ರಾರಂಭದಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತಿತ ಎಂದರು.
 
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್, ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್‌ಕುಮಾರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎನ್.ಎಂ.ಕಾಂತರಾಜ್, ಕಲಾವಿದ ಎಚ್.ಎಸ್.ಅನಂತಪದ್ಮನಾಭ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸತೀಶ್, ಪಲ್ಲವಿ, ಮಂಜುಳಾ, ವಾಸುಕಿ ಉಪಸ್ಥಿತರಿದ್ದರು.
 
ಸಭೆಯಲ್ಲಿ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರಿನ ಯಕ್ಷಗಾನ ಕಲಾವಿದ ಎಚ್.ಎಸ್. ಅನಂತಪದ್ಮನಾಭ ಅವರನ್ನು ಸನ್ಮಾನಿಸಲಾಯಿತು.
 
***
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡಬೇಕು. ಮನುಷ್ಯ ಮನುಷ್ಯನಾಗಿ ಬಾಳುವ ಸಂಸ್ಕೃತಿಯನ್ನು, ಮೌಲ್ಯವನ್ನು ನೀಡ ಬೇಕಾಗಿದೆ 
-ಡಾ.ಕೆ.ಉಮೇಶ್,
ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.