ADVERTISEMENT

ಮೂರನೇ ದಿನ 10 ನಾಮಪತ್ರ ಸಲ್ಲಿಕೆ

ಶುಭ ಮುಹೂರ್ತ ನೋಡಿ ಉಮೇದುವಾರಿಕೆ ಸಲ್ಲಿಸಲು ಮುಗಿಬಿದ್ದ ಮುಖಂಡರು; ಇಷ್ಟ ದೈವಗಳ ದರ್ಶನ,ಪೂಜೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 5:50 IST
Last Updated 20 ಏಪ್ರಿಲ್ 2018, 5:50 IST

ಚಿಕ್ಕಬಳ್ಳಾಪುರ:  ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗುರುವಾರ 10 ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ, ಬಾಗೇಪಲ್ಲಿ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ, ಗೌರಿಬಿದನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಜೈಪಾಲ್‌ರೆಡ್ಡಿ, ಜೆಡಿಎಸ್‌ ಅಭ್ಯರ್ಥಿ ಸಿ.ಆರ್. ನರಸಿಂಹಮೂರ್ತಿ ಮತ್ತು ಚಿಂತಾಮಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಸದವರ ಪೈಕಿ ಪ್ರಮುಖರು.

ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿನ ಮಾರತಹಳ್ಳಿ ನಿವಾಸಿ ಎಸ್.ಎಸ್. ಗೋವಿಂದರೆಡ್ಡಿ, ಚಿಂತಾಮಣಿ ತಾಲ್ಲೂಕಿನ ಸಾಲಕಮಾಕಲಹಳ್ಳಿ ಎಸ್.ಎನ್. ಸುಬ್ಬಾರೆಡ್ಡಿ, ಚಿಂತಾಮಣಿಯಲ್ಲಿ ವೆಂಕಟರಮಣ್ಣ, ಭಾಸ್ಕರ್ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ನಾಮಪತ್ರ ಸಲ್ಲಿಕೆ ಆರಂಭವಾದ ಮೊದಲ ದಿನ ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಏಳು ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ.

ಶುಭ ಮುಹೂರ್ತದ ಕಾರಣಕ್ಕಾ ಗಿಯೇ ಎರಡು ದಿನ ನಾಮಪತ್ರ ಸಲ್ಲಿಸುವುದನ್ನು ಮುಂದೂಡಿದ ಅನೇಕ ಅಭ್ಯರ್ಥಿಗಳು ಗುರುವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಮ್ಮ ಇಷ್ಟ ದೇವರ ಸನ್ನಿಧಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದ ದೃಶ್ಯಗಳು ಗೋಚರಿಸಿದವು.

ಚಿಂತಾಮಣಿಯಲ್ಲಿ ಜೆಡಿಎಸ್ ಅಭ್ಯರ್ಥಿ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಕೈವಾರದ ಯೋಗಿ ನಾರೇಯಣ ದೇವಾಲಯ, ಮುರುಗಮಲ್ಲದ ದರ್ಗಾ ಮತ್ತು ಕೋಲಾರ ಕ್ರಾಸ್‌ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇಷ್ಟ ದೈವಗಳ ಮೊರೆ

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸಹ ತಮ್ಮ ಮನೆದೇವರಾದ ಕುಪ್ಪಳಿಯ ಆಂಜನೇಯ ಸ್ವಾಮಿ, ನಂದಿಯ ಭೋಗನಂದಿಶ್ವರ ದೇವಾಲಯ, ಸೂಲಲಪ್ಪನ ದಿಣ್ಣೆಯಲ್ಲಿನ ಬಯಲಾಜಂನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಚಾರದ ವಾಹನ ಏರಿದರು.

ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಅವರು ಯಲ್ಲಮ ದೇಗುಲ, ಕೋಟೆ ಆಂಜನೇಯ ಸ್ವಾಮಿ, ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಉಮೇದುವಾರಿಕೆ ಸಲ್ಲಿಸಲು ಚುನಾವಣಾಧಿಕಾರಿ ಕಾರ್ಯಾಲಯತ್ತ ಹೊರಟರು.

ಗೌರಿಬಿದನೂರಿನಲ್ಲಿ ಕೆ. ಜೈಪಾಲ್‌ ರೆಡ್ಡಿ ಅವರು ಗಣಪತಿ ಮೊರೆ ಹೋದರೆ, ಜೆಡಿಎಸ್ ಅಭ್ಯರ್ಥಿ ಸಿ.ಆರ್. ನರಸಿಂಹಮೂರ್ತಿ ಅವರು ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ತಾಲ್ಲೂಕು ಕಚೇರಿಯತ್ತ ಮೆರವಣಿಗೆ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.