ADVERTISEMENT

ಮೂರು ದಶಕದಿಂದ ಟಾರು ಕಾಣದ ರಸ್ತೆ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 6:13 IST
Last Updated 13 ನವೆಂಬರ್ 2017, 6:13 IST
ಚಿಕ್ಕಬಳ್ಳಾಪುರದ ಭಾರತಿ ನಗರದಲ್ಲಿ ಟಾರು ಕಾಣದೆ ಅಧ್ವಾನಗೊಂಡಿರುವ ರಸ್ತೆ
ಚಿಕ್ಕಬಳ್ಳಾಪುರದ ಭಾರತಿ ನಗರದಲ್ಲಿ ಟಾರು ಕಾಣದೆ ಅಧ್ವಾನಗೊಂಡಿರುವ ರಸ್ತೆ   

ಚಿಕ್ಕಳ್ಳಾಪುರ: ಕಿತ್ತು ಹೋಗಿರುವ ಟಾರು, ಕಂಡಲ್ಲೆಲ್ಲ ಗುಂಡಿಗಳು, ಮಳೆ ಸುರಿದರೆ ಮಡುಗಟ್ಟುವ ನೀರು, ಎಲ್ಲೆಂದರಲ್ಲಿ ಸುರಿದ ತ್ಯಾಜ್ಯ, ಸಹಿಸಲಾಗದ ದುರ್ವಾಸನೆ, ಸಂಜೆಯಾದರೆ ಬೆನ್ನತ್ತಿ ಬರುವ ಸೊಳ್ಳೆಗಳ ಹಿಂಡು.. ಹೀಗೆ ಹೇಳುತ್ತ ಹೋದರೆ ಒಂದೆರಡಲ್ಲ ಹತ್ತಾರಿವೆ ಭಾರತಿ ನಗರದಲ್ಲಿರುವ ಎಲ್‌ಐಸಿ ಕಚೇರಿ ಮುಂದಿನ ರಸ್ತೆಯನ್ನು ಆವರಿಸಿಕೊಂಡಿರುವ ಸಮಸ್ಯೆಗಳು.

20ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಈ ರಸ್ತೆ ಸುಮಾರು 30 ವರ್ಷಗಳಿಂದ ಟಾರು ಕಂಡಿಲ್ಲ! ಕಿತ್ತು ಹೋದ ರಸ್ತೆಯಲ್ಲೇ ಜನರು ಹತ್ತಾರು ವರ್ಷಗಳಿಂದ ಕಿರಿಕಿರಿ ಅನುಭವಿಸುತ್ತಲೇ ದಿನದೂಡುತ್ತಿದ್ದಾರೆ. ಜೋರಾಗಿ ಮಳೆ ಸುರಿದರಂತೂ ಅಧ್ವಾನಗೊಳ್ಳುವ ಈ ರಸ್ತೆಯಲ್ಲಿ ಸ್ಥಳೀಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಷ್ಟಪಟ್ಟು ನಡೆದಾಡಬೇಕಾದ ಸ್ಥಿತಿ ಉಂಟಾಗುತ್ತದೆ.

ಮಳೆಗಾಲ ಆರಂಭಗೊಂಡರೆ ಈ ರಸ್ತೆಯಲ್ಲಿರುವ ವಿವಿಧ ಮಳಿಗೆಗಳ ಮಾಲೀಕರಿಗೆ ‘ರಾಹು’ಕಾಲ ಬಂದಂತೆ. ರಸ್ತೆ ತುಂಬ ಇರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ನಿಂತರೆ ಈ ರಸ್ತೆಯತ್ತ ಜನರೇ ಸುಳಿಯುವುದಿಲ್ಲ. ಆಗೆಲ್ಲ ನಾವು ವ್ಯಾಪಾರವಿಲ್ಲದೆ ನಷ್ಟ ಅನುಭವಿಸಬೇಕಾಗಿ ಬರುತ್ತದೆ. ರಸ್ತೆ ಇಷ್ಟೊಂದು ಗಬ್ಬೆದ್ದು ಹೋದರೂ ನಗರಸಭೆಯವರಾಗಲಿ, ಆರೋಗ್ಯ ಇಲಾಖೆಯವರಾಗಲಿ ಇತ್ತ ಇಣುಕಿ ನೋಡುತ್ತಿಲ್ಲ ಎಂದು ಸ್ಥಳೀಯರ ಮಳಿಗೆದಾರರು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಎರಡು ಬಾರಿ ಮೆಟ್ಲಿಂಗ್‌!: ‘ಈ ರಸ್ತೆಗೆ ಹಿಂದೆ ಎರಡು ಬಾರಿ ಜಲ್ಲಿ ಕಲ್ಲು ಹಾಕಿ ಮೆಟ್ಲಿಂಗ್‌ ಮಾಡಲಾಗಿದೆ. ಆದರೆ ಟಾರು ಹಾಕಲಿಲ್ಲ. ಹಾಳಾದ ರಸ್ತೆಯಿಂದಾಗಿ ಚರಂಡಿಗಳು ಹಾಳಾಗಿ ಹೋಗಿವೆ. ರಸ್ತೆಯ ಮೇಲಿನ ತ್ಯಾಜ್ಯವೆಲ್ಲ ಚರಂಡಿ ಸೇರಿ ಅವು ಕಟ್ಟಿಕೊಂಡಿವೆ. ಸವಾರರು, ಪಾದಚಾರಿಗಳ ಪರದಾಟಕ್ಕೆ ಕೊನೆಯ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಮಾತ್ರ ಈವರೆಗೆ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆಯನ್ನು ಮೂರುವರೆ ವರ್ಷಗಳ ಹಿಂದೆ ನಗರಸಭೆಯವರು ಹೂಳು ತೆಗೆದು ಅಗಲ ಮಾಡಲು ನಡೆಸಿದ ಕಾಮಗಾರಿ ಅರ್ಧಂಬರ್ಧವಾಯಿತು. ಅಲ್ಲಲ್ಲಿ ಕೆಲವರು ತಮ್ಮ ಮಳಿಗೆಗಳ ಎದುರು ಕಾಲುವೆಯನ್ನು ಕಲ್ಲಿನಿಂದ ಕಟ್ಟಿಸಿಕೊಂಡು ಮುಚ್ಚಿದ್ದು ಬಿಟ್ಟರೆ ಉಳಿದಂತೆ ರಾಜಕಾಲುವೆ ದೊಡ್ಡ ತೆರೆದ ಚರಂಡಿಯಂತಾಗಿದೆ. ರಸ್ತೆಯ ತ್ಯಾಜ್ಯವೆಲ್ಲ ಈ ಕಾಲುವೆಗೆ ಸೇರುತ್ತಿದೆ’ ಎಂದು ತಿಳಿಸಿದರು.

‘ನಿತ್ಯ ಈ ರಸ್ತೆಯನ್ನು ಬಳಸುವ ಸ್ಥಳೀಯರಂತೂ ಬೇಸತ್ತು ಹೋಗಿದ್ದಾರೆ. ರಸ್ತೆ ಮಾತ್ರವಲ್ಲದೆ ಇದೇ ರಸ್ತೆಯಲ್ಲಿ ಸಿಗುವ ಪುಷ್ಕರಣಿ ಕೂಡ ದಿನೇ ದಿನೇ ಕಸದ ತೊಟ್ಟಿಯಾಗುತ್ತಿದೆ. ಈ ರಸ್ತೆಯಲ್ಲಿ ಪೌರ ಕಾರ್ಮಿಕರು ವಾರಕ್ಕೆ ಮೂರು ದಿನ ಬರುತ್ತಾರೆ. ಹೀಗಾಗಿ ಜನರು ಉಳಿದ ಮೂರು ದಿನದ ತ್ಯಾಜ್ಯವನ್ನು ಪುಷ್ಕರಣಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಹೀಗಾಗಿ ಇಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್‌ ಆರೋಪಿಸಿದರು.

‘ಬಿ.ಬಿ ರಸ್ತೆಯಲ್ಲಿ ವಾಹನ ದಟ್ಟಣೆಯಾದಾಗ ಅನೇಕ ಸವಾರರು ಈ ರಸ್ತೆಯ ಮೂಲಕ ನಂದಿ ರಸ್ತೆಯ ಸಂಪರ್ಕಿಸುತ್ತಾರೆ. ಹೀಗಾಗಿ ಈ ಬಳಸು ರಸ್ತೆಯನ್ನು ಸುಸ್ಥಿತಿಯಲ್ಲಿಡಲು ನಗರಸಭೆ ಆದ್ಯತೆ ನೀಡಬೇಕಾಗಿದೆ. ತುರ್ತಾಗಿ ರಸ್ತೆ ಅಭಿವೃದ್ಧಿಪಡಿಸಿದರೆ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ’ ಎಂದು ಸ್ಥಳೀಯರಾದ ಅಂಜನಮೂರ್ತಿ ಹೇಳಿದರು.

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.