ADVERTISEMENT

ರೈಲ್ವೆ ಕೆಳಸೇತುವೆಯಲ್ಲಿ ನೀರು: ಪರ್ಯಾಯ ವ್ಯವಸ್ಥೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:20 IST
Last Updated 8 ನವೆಂಬರ್ 2017, 6:20 IST

ಶಿಡ್ಲಘಟ್ಟ: ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಯಿಂದಾಗಿ ಮಳೆ ನೀರು ಹರಿಯದಂತಾಗಿದೆ. ಮಳೆಯಾದಾಗ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ನಗರದ ಸುತ್ತಮುತ್ತ ಜನದಟ್ಟಣೆ ಇರುವ ಪ್ರದೇಶದ ಜನರ ಅನುಕೂಲಕ್ಕಾಗಿ ನಿರ್ಮಿಸಿದ ಕೆಳಸೇತುವೆ ಇಲ್ಲಿಯ ಜನರಿಗೆ ಶಾಪವಾಗಿ ಪರಿಣಮಿಸಿದೆ. ಮಳೆ ಬಂದಾಗ ಕೆಳ ಸೇತುವೆ ಅಡಿಯಲ್ಲಿ ನೀರು ಹರಿದು ಹೊರ ಹೋಗಲು ದಾರಿಯಿಲ್ಲದೆ ನಿಲ್ಲುತ್ತಿದೆ. ನಿಂತ ನೀರಿನಿಂದ ಡಾಂಬರ್‌ ಕಿತ್ತು ಹೋಗಿ ತಳದಲ್ಲಿರುವ ಕಂಬಿಗಳು, ಜಲ್ಲಿ ಕಲ್ಲುಗಳು ತೆರೆದುಕೊಂಡಿವೆ. ಗುಂಡಿಗಳಾಗಿ ಮೃತ್ಯುಕೂಪವಾಗಿದೆ.

‘ಅತ್ಯಂತ ಅವೈಜ್ಞಾನಿಕವಾಗಿ, ಆತುರದಿಂದ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳಲ್ಲಿ ಸಂಗ್ರಹವಾಗುವ ನೀರನ್ನು ಕೆಲವೊಮ್ಮೆ ಸಾರ್ವಜನಿಕರೆ ಖಾಲಿ ಮಾಡಿದರೆ, ಉಳಿದಂತೆ ನಗರಸಭೆ ಸಿಬ್ಬಂದಿ ಜನರ ಒತ್ತಾಯಕ್ಕೆ ಮಣಿದು ಖಾಲಿ ಮಾಡಿಸುವರು. ಆದರೆ ಹಾಳಾದ ರಸ್ತೆ ದುರಸ್ತಿಗೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ’ ಎಂದು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ ಅವರ ಆರೋಪ.

ರೈಲ್ವೆ ಕೆಳ ಸೇತುವೆ ಒಳಗಿನ ರಸ್ತೆ ಹಲವು ಹಳ್ಳಿಗಳಿಗೆ ಮುಖ್ಯ ಸಂಪರ್ಕದ ದಾರಿ. ಇಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು. ಆದರೆ ಮಳೆಗಾಲದಲ್ಲಿ ನೀರು ನಿಂತರೆ ಇಲ್ಲಿ ಓಡಾಡುವುದು ಕಷ್ಟ. ಪಾದಚಾರಿಗಳು, ದ್ವಿಚಕ್ರವಾಹನ ಸವಾರರಿಗೆ ಹೆಚ್ಚು ತೊಂದರೆ ಆಗುವುದು. ಹಲವರು ಬಿದ್ದು ಗಾಯಗೊಂಡಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದ್ಲೂಡಿನ ರಸ್ತೆಯ ಕೆಳ ಸೇತುವೆಯಲ್ಲಿ ನಿಂತ ನೀರನ್ನು ಮಂಗಳವಾರ ನಗರಸಭೆಯಿಂದ ಹೀರು ಯಂತ್ರದ ಮೂಲಕ ನೀರನ್ನು ಖಾಲಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ದೂರದೃಷ್ಟಿಯಿಂದ ಯೋಜನೆ ರೂಪಿಸಿ, ನಿರ್ಮಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಕಾಮಗಾರಿ ನಡೆಯುವಾಗ ಸಂಸದರು ಸ್ಥಳ ಪರಿಶೀಲನೆ ನಡೆಸಿದ್ದರು. ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಿದ್ದರು. ಆದರೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಕಾಮಗಾರಿಯಿಂದ ಸಮಸ್ಯೆಯಿಂದ ಸಾರ್ವಜನಿಕರು ಅನುಭವಿಸುವ ಕಷ್ಟ ತಪ್ಪಿಲ್ಲ. ರೈಲ್ವೆ ಇಲಾಖೆ ಅಧಿಕಾರಿಗಳು ಪರ್ಯಾಯ ಶಾಶ್ವತ ವ್ಯವಸ್ಥೆ ರೂಪಿಸಿದರೆ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಇದ್ಲೂಡು ವೆಂಕಟೇಶಪ್ಪ, ಆನಂದ್, ಗಾಂಧಿನಗರ ಹರೀಶ್ ಎಂದು ಒತ್ತಾಯಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.