ADVERTISEMENT

ವಿದ್ಯುತ್‌ ತಂತಿ ತುಳಿದು ಯುವಕರಿಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 9:12 IST
Last Updated 29 ಆಗಸ್ಟ್ 2015, 9:12 IST

ಗೌರಿಬಿದನೂರು: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮಾವಿನ ಎಲೆ ತರಲು ಹೋದ ಇಬ್ಬರು ಬಾಲಕರು ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಚೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

ಮೃತರನ್ನು ನವೀನ್ (15), ರಮೇಶ್ (13) ಎಂದು ಗುರುತಿಸಲಾಗಿದೆ. ಇಬ್ಬರು ಶುಕ್ರವಾರ ಬೆಳಿಗ್ಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮಾವಿನ ಎಲೆ ತರಲು ಗ್ರಾಮದ ಹೊರವಲಯದ ನರಸಿಂಹಪ್ಪ ಎನ್ನುವವರ ತೋಟಕ್ಕೆ ಹೋಗಿದ್ದರು. ಹೊಲದಲ್ಲಿ ತುಂಡಾಗಿ ಬಿದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನವೀನ್ ಮಂಚೇನಹಳ್ಳಿ ಸಿಪಿಯು ಸಂಯುಕ್ತ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ರಮೇಶ್ ಮಂಚೇನಹಳ್ಳಿ ಸಮೀಪದ ಕೊಂಡೇನಹಳ್ಳಿ ಗ್ರಾಮದ ಚೇತನ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಬೀರಮಂಗಲ ಗ್ರಾಮದ ರಮೇಶ್  ಮಂಚೇನಹಳ್ಳಿಯಲ್ಲಿ ದೊಡ್ಡಮ್ಮನ ಮನೆಯಲ್ಲಿ ಇದ್ದು ಶಾಲೆಗೆ ಹೋಗುತ್ತಿದ್ದ.  ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳ ಸಾವಿಗೆ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತ ಬಾಲಕರ ಕುಟುಂಬಕ್ಕೆ ತಲಾ ₨ 3 ಲಕ್ಷ ಪರಿಹಾರ ಕೊಡಿವ ಭರವಸೆ ನೀಡಿದರು. ಇನ್ನೂ ಮುಂದೆ ಇಂತಹ ಘಟನೆ ಮರುಕಳಿಸದಂತೆ ಬೆಸ್ಕಾಂ ಇಲಾಖೆ ಸಿಬ್ಬಂದಿ ಎಚ್ಚರ ವಹಿಸುವಂತೆ ತಿಳಿಸಿದರು. ಎಂಜಿನಿಯರ್ ನಾಗರಾಜು, ಸಬ್ ಇನ್ಸ್ಪೆಕ್ಟರ್ ಸುಂದರ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.