ADVERTISEMENT

ಶಿಥಿಲಗೊಂಡ ಅಂಗನವಾಡಿ ಕಟ್ಟಡ: ಮಕ್ಕಳ ಜೀವಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 11:31 IST
Last Updated 24 ಏಪ್ರಿಲ್ 2014, 11:31 IST

ಗುಡಿಬಂಡೆ: ತಾಲ್ಲೂಕಿನ ವೀರರಾವುತನ­ಹಳ್ಳಿಯಲ್ಲಿರುವ ಅಂಗನವಾಡಿ ಕಟ್ಟಡ ತುಂಬಾ ಶಿಥಿಲಗೊಂಡಿದೆ. ಒಳಭಾಗದ ಗೋಡೆ ಮತ್ತು ಛಾವಣಿ ಸೀಳು ಬಿಟ್ಟಿದ್ದು, ಕಟ್ಟಡ ಯಾವಾಗ ಬೇಕಾ­ದರೂ ಕುಸಿಯಬಹುದು ಎಂಬ ಆತಂಕ ಪೋಷಕರು ಮತ್ತು ಮಕ್ಕಳನ್ನು ಕಾಡು­ತ್ತಿದೆ.

ಇದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆನಂದಮ್ಮ ಅವರು ವಾಸ­ವಿರುವ ಗ್ರಾಮ. ಈ ಅಂಗನವಾಡಿ ಕಟ್ಟಡ ಅವರ ಮನೆಯಿಂದ 100 ಮೀಟರ್‌ ವ್ಯಾಪ್ತಿಯೊಳಗಿದೆ!

‘ಮಳೆಗಾಲದಲ್ಲಂತೂ ಇಲ್ಲಿ ಇರ­ಲಾಗು­ವುದಿಲ್ಲ. ಕಟ್ಟಡದ ಮಾಳಿಗೆ­ಯಿಂದ ಸೋರುವ ಮಳೆ ನೀರಿನಿಂದ ಇಲ್ಲಿ ಇರಲು ಕಷ್ಟವಾಗುತ್ತದೆ. ಇಲ್ಲಿ  ಪ್ರತಿ ದಿನ 18 ಮಕ್ಕಳು ಬರುತ್ತಾರೆ. ಮಕ್ಕಳು ಅಂಗನವಾಡಿ­ಯಿಂದ ವಾಪಸ್‌ ಮನೆಗೆ ಬರುವವರೆಗೆ ಪೋಷಕರಿಗೆ ನೆಮ್ಮದಿ ಇರುವುದಿಲ್ಲ ಎಂದು ಅಂಗನವಾಡಿ ಕೇಂದ್ರದ ಸಹಾಯಕಿ ನರಸಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನಕ್ಕೊಂದು ಅಗ್ಗದ ಯೋಜನೆ ಪ್ರಕಟಿಸುತ್ತಲೇ ಇರುವ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ಸ್ವಂತ
ಕಟ್ಟಡ ಸೌಲಭ್ಯ ಕಲ್ಪಿಸಲು ಮುಂದಾಗದಿ­ರುವುದು ವಿಪರ್ಯಾಸದ ಸಂಗತಿ’ ಎಂದು ಗ್ರಾಮಸ್ಥರು ತಿಳಿಸಿದರು.

‘ಒಂದೊಮ್ಮೆ ಗೋಡೆ, ಛಾವಣಿ ಕುಸಿದು ಅನಾಹುತ ಸಂಭವಿಸಿದ ನಂತರ ಪರಿಹಾರ ಕ್ರಮ ಕೈಗೊಳ್ಳುವ ಬದಲು ಈಗಲೇ ಮುಂಜಾಗ್ರತೆ ವಹಿಸುವುದು ಅಗತ್ಯ.  ಶಿಥಿಲ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸಬೇಕು. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಪ್ರಯೋ­ಜನವಾಗಿಲ್ಲ’ ಎಂದು ಅವರು ತಿಳಿಸಿದರು.

‘ದಪ್ಪ ಚರ್ಮದ ಅಧಿಕಾರಿಗಳು ಕಚೇರಿ ಕುರ್ಚಿಯನ್ನು ಬಿಟ್ಟು ಇನ್ನಾ­ದರೂ ಈ ಕೇಂದ್ರಕ್ಕೆ ಭೇಟಿ ನೀಡಿ ಪರಿ­ಶೀಲಿಸಲಿ. ಪಕ್ಕದಲ್ಲೇ ಪಾಯ ಹಾಕಿ ನಾಲ್ಕು ವರ್ಷವಾದರೂ ಕಟ್ಟಡ ಮಾತ್ರ ನಿರ್ಮಾಣಗೊಂಡಿಲ್ಲ. ಹೊಸ ಕಟ್ಟಡ ನಿರ್ಮಿಸುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಲಿ’ ಎಂದು ಗ್ರಾಮದ ಕಾಮಣ್ಣ, ವೆಂಕಟೇಶಪ್ಪ, ನಾಗೇಶ, ನಾಗರಾಜ ಮತ್ತು ಅನಂತರಾಜು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.