ADVERTISEMENT

ಸಮ್ಮೇಳನಕ್ಕೆ ಸರೋಜಾ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:24 IST
Last Updated 26 ಡಿಸೆಂಬರ್ 2017, 8:24 IST

ಚಿಕ್ಕಬಳ್ಳಾಪುರ: ನಗರದಲ್ಲಿ ಸೋಮ ವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗುಡಿಬಂಡೆಯಲ್ಲಿ ಜನವರಿ 27, 28 ರಂದು ನಡೆಸಲು ಉದ್ದೇಶಿಸಿರುವ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರಿನ ಆಕ್ಸ್‌ಫರ್ಡ್ ವೈದ್ಯಕೀಯ ವಿದ್ಯಾಲಯದ ರೇಡಿಯಾಲಜಿ ವಿಭಾಗದ ಮುಖ್ಯಸ್ಥೆ ಆರ್‌.ಕೆ.ಸರೋಜಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ‘ಗೌರಿಬಿದನೂರು ತಾಲ್ಲೂಕಿನ ರಾಮಪುರ ಗ್ರಾಮದವರಾದ ಸರೋಜಾ ಅವರು ಜಿಲ್ಲೆಯಲ್ಲಿ ಮೊಟ್ಟ ಮೊದಲ ರಾಜ್ಯೋತ್ಸವ ಪ್ರಶಸ್ತಿ ಪಡೆದು ಏಕೈಕ ಮಹಿಳೆಯಾಗಿದ್ದಾರೆ. ಜತೆಗೆ ವೈದ್ಯರಾಗಿ, ಸಮಾಜ ಸೇವಕರಾಗಿ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿರುವ ಸರೋಜಾ ಅವರು ಕಳೆದ 32 ವರ್ಷಗಳಿಂದ ಲೇಖಕಿಯಾಗಿ ಗುರುತಿಸಿಕೊಂಡು ಅನೇಕ ಕೃತಿಗಳನ್ನು ಹೊರ ತಂದಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಕಸಾಪ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಶಿಷ್ಟಾಚಾರದಂತೆ ಅಧಿಕೃತ ಆಹ್ವಾನ ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಸಮ್ಮೇಳನ ಅಂಗವಾಗಿ ಹೊರತರುವ ಸ್ಮರಣ ಸಂಚಿಕೆಗೆ ಆಸಕ್ತ ಕವಿ, ಬರಹಗಾರರು ತಮ್ಮ ಕವಿತೆ ಲೇಖನಗಳನ್ನು ನುಡಿ ತಂತ್ರಾಂಶದಲ್ಲಿ ಸಿದ್ದಪಡಿಸಿ, ಪರಿಷತ್ತಿನ ಇಮೇಲ್‌ kasapacbpur@gmail.com ವಿಳಾಸಕ್ಕೆ ಕಳುಹಿಸಬಹುದು ಅಥವಾ ಜನವರಿ 10ರ ಒಳಗೆ ಕಸಾಪ ಜಿಲ್ಲಾ ಘಟಕದ ಕಚೇರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಂಜುನಾಥ್ (9901767369) ಅವರನ್ನು ಸಂಪರ್ಕಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.