ADVERTISEMENT

ಸರ್ವ ಧರ್ಮ ಸಮನ್ವಯ ಕೇಂದ್ರ ಕೈವಾರ

ಎಂ.ರಾಮಕೃಷ್ಣಪ್ಪ
Published 10 ಸೆಪ್ಟೆಂಬರ್ 2017, 8:32 IST
Last Updated 10 ಸೆಪ್ಟೆಂಬರ್ 2017, 8:32 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠ
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠ   

ಚಿಂತಾಮಣಿ: ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಕೈವಾರದ ಯೋಗಿನಾರೇಯಣ ಮಠವು ಸಾಂಸ್ಕೃತಿಕ, ಆಧ್ಯಾತ್ಮಿಕ, ಸಂಸ್ಕೃತಿ, ಕಲೆ, ಸಾಹಿತ್ಯದ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ದೇವಾಲಯಗಳ ನಗರವಾಗಿರುವ ಕೈವಾರವು ಜಿಲ್ಲೆಗೆ ಮಕುಟಪ್ರಾಯವಾಗಿದೆ.

ದಕ್ಷಿಣ ಭಾರತದಲ್ಲೇ ಪ್ರಮುಖ ಯಾತ್ರಾಸ್ಥಳ ಎಂದು ಗುರುತಿಸಿಕೊಳ್ಳಲು ಗ್ರಾಮದಲ್ಲಿ ನೆಲೆಸಿರುವ ಯೋಗಿನಾರೇಯಣ ಮಠ ಎಂದರೆ ಅತಿಶಯೋಕ್ತಿಯಾಗಲಾರದು. ಯೋಗಿನಾರೇಯಣ ಮಠವು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು, ಯೋಗಿನಾರೇಯಣ ಯತೀಂದ್ರರ ತತ್ವ, ಸಂದೇಶಗಳ ಪ್ರಚಾರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳುತ್ತಿದೆ.

ಸಾಮಾಜಿಕವಾಗಿ ಹಾಗೂ ಧಾರ್ಮಿವಾಗಿ ಮಹಾನ್ ಕ್ರಾಂತಿಯನ್ನು ಮಾಡುತ್ತಿರುವ ಕೈವಾರ ಗ್ರಾಮಕ್ಕೆ ಪೌರಾಣಿಕ ಮತ್ತು ಚಾರಿತ್ರಿಕ ಇತಿಹಾಸ ಇದೆ. ಕ್ಷೇತ್ರದಲ್ಲಿ ಸದಾ ಭಜನೆ, ಪೂಜೆ, ಉಪನ್ಯಾಸ, ಸತ್ಸಂಗ ಹಾಗೂ ಬಡವರ್ಗದವರ ಬದುಕಿಗೆ ಅನುಕೂಲವಾಗುವಂತಹ ವಿಚಾರಗೋಷ್ಠಿಗಳು, ತರಬೇತಿಗಳು, ಸಾಹಿತ್ಯ ಕಾರ್ಯಕ್ರಮಗಳು ಆಶ್ರಮದ ವತಿಯಿಂದ ನಿರಂತರವಾಗಿ ನಡೆಯುತ್ತಿರುತ್ತವೆ.

ADVERTISEMENT

ಸದಾ ಬರಗಾಲಕ್ಕೆ ತುತ್ತಾಗುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪರಿಸರವನ್ನು ಪುನರುಜ್ಜೀವನ ಮಾಡಲು ಹಾಗೂ ಜನಜಾಗೃತಿ ಮೂಡಿಸಲು ‘ಯೋಗಿನಾರೇಯಣ ಕಲ್ಪವೃಕ್ಷ ಯೋಜನೆಯನ್ನು’ ಅನುಷ್ಠಾನಕ್ಕೆ ತಂದಿದೆ. ಮಠದ ಆವರಣದಲ್ಲಿ ಸಸಿಗಳ ನರ್ಸರಿಯನ್ನು ಮಾಡಿ ರೈತರಿಗೆ ಮತ್ತು ಸಾಲುಮರಗಳನ್ನು ಹಾಕುವವರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತದೆ. ರೈತರಿಗೆ ವಿತರಣೆಯ ಜತೆಗೆ ಮಳೆಗಾಲದಲ್ಲಿ ಮಠದಿಂದಲೇ ಸಸಿಗಳನ್ನು ನೆಡಲಾಗುತ್ತದೆ.

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದ ಸಹಯೋಗದೊಂದಿಗೆ ಪ್ರತಿ ವರ್ಷ ಶ್ರಾವಣ ಮಾಸದ ಪ್ರಥಮ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮಿ ವ್ರತವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತದೆ. ಮಠದ ವತಿಯಿಂದಲೇ ಉಚಿತವಾಗಿ ಪೂಜಾ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಯಾವುದೇ ಜಾತಿ ಮತದ ಭೇದವಿಲ್ಲದೆ ಸಾವಿರಾರು ಮಹಿಳೆಯರು ಪೂಜೆಯಲ್ಲಿ ಭಾಗವಹಿಸುತ್ತಾರೆ.

ಪ್ರತಿ ವರ್ಷ ಆಷಾಡ ಮಾಸದಲ್ಲಿ 3 ದಿನಗಳ ಕಾಲ ನಿರಂತರವಾಗಿ ನಡೆಯುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿರುತ್ತದೆ. 72 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸಿ ಸಂಗೀತ ಸೇವೆ ಸಮರ್ಪಿಸುತ್ತಾರೆ.

ಸಂಗೀತ, ಕಲೆ, ಸಾಹಿತ್ಯ, ನಾಟಕ, ಜಾನಪದ ಕಾರ್ಯಕ್ರಮಗಳಿಗೆ ಹಿಂದೆ ರಾಜಾಶ್ರಯ ಸಿಗುತ್ತಿತ್ತು. ರಾಜ ಮಹಾರಾಜರು ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟು ಆಸ್ಥಾನಗಳಲ್ಲಿ ಕಲಾವಿದರಿಗೆ ಆಶ್ರಯ ನೀಡುತ್ತಿದ್ದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಕೈವಾರ ಮಠವು ಸಹ ನಶಿಸುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ.

ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರಿ, ಗಮಕ ಪರಿಷತ್‌ ಮತ್ತಿತರ ಸಂಸ್ಥೆಗಳು ನಡೆಸುವ ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ ಮಠದಲ್ಲಿ ಅವಕಾಶ ಮಾಡಿ ಕೊಡಲಾಗುತ್ತದೆ. ಸುಸಜ್ಜಿತ ವೇದಿಕೆ, ಆಗಮಿಸುವ ಕಲಾವಿದರಿಗೆ. ಸಾಹಿತಿಗಳಿಗೆ ಉಚಿತ ಊಟ, ವಸತಿ ಒದಗಿಸಲಾಗುತ್ತದೆ. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಹಕಾರ ನೀಡಲು ಮಠವು ಸದಾ ಸಿದ್ಧವಾಗಿರುತ್ತದೆ. ಕೈವಾರದಂತಹ ಸಣ್ಣ ಗ್ರಾಮದಲ್ಲಿ 54 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿಯು ಯೋಗಿ ನಾರೇಯಣ ಮಠದ್ದಾಗಿದೆ.

ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹ ಗಳನ್ನು ನಸಲಾಗುತ್ತದೆ. ಬಡವರಿಗೆ ಮದುವೆಗಳ ಖರ್ಚು ಹೊರೆಯಾಗಬಾರದು, ಜೀವನವನ್ನೆಲ್ಲ ಸಾಲ ಸೋಲಗಳಲ್ಲಿ ಸಿಲುಕಿ ಕಳೆಯಬಾರದು ಎನ್ನುವ ದೃಷ್ಟಿಯಿಂದ ಮಠವು ಮದುವೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ವಿವಾಹಗಳಿರುವ ಸಂದರ್ಭಗಳಲ್ಲಿ ದಿನಕ್ಕೆ ಕನಿಷ್ಠ 50 ರಿಂದ 75 ಮದುವೆಗಳು ನಡೆಯುತ್ತವೆ. ಜನತೆಯ ಆರ್ಥಿಕ ಮಟ್ಟಕ್ಕೆ ತಕ್ಕಂತೆ ಎಲ್ಲ ವರ್ಗವರಿಗೂ ಅನುಕೂಲ ಮಾಡಿಕೊಡಲಾಗುತ್ತದೆ.

ಪ್ರತಿ ವರ್ಷ ನಡೆಯುವ ಜಾತ್ರೆ, ಆರಾಧನಾ ಮಹೋತ್ಸವ, ಅಷ್ಟಾಕ್ಷರಿ ಜಪಯಜ್ಞ, ಮುತ್ತೈದೆ ಭಾಗ್ಯ, ಪ್ರತಿಮಾಸದ ಹುಣ್ಣಿಮೆ ಹಾಗೂ ಹಬ್ಬ ಹರಿದಿನಗಳ ಕಾರ್ಯಕ್ರಮಗಳು, ಸಂಕೀರ್ತನಾ ಯೋಜನೆ ಕಾರ್ಯಕ್ರಮಗಳು ನಡೆಯುತ್ತವೆ. ಮಠವು ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ. ಯೋಗಿನಾರೇಯಣ ಯತೀಂದ್ರರ ಆಶಯದಂತೆ ಎಲ್ಲ ಕಾರ್ಯಕ್ರಮ ನಡೆಯುತ್ತಿವೆ.

ಯತೀಂದ್ರರು ಹೆಸರು ಎಲ್ಲ ಕಾರ್ಯಕ್ರಮಗಳಿಗೂ ಪ್ರೇರಣೆಯಾಗುತ್ತದೆ ಎಂದು ಮಠದ ಧರ್ಮಾಧಿಕಾರಿ ಡಾ. ಎಂ.ಆರ್‌.ಜಯರಾಂ ಹೇಳುವರು.
ಮಠದ ಜತೆಗೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದವಾದ ಅಮರನಾರೇಯಣ ಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ, ಯೋಗಿನಾರೇಯಣ ಯತೀಂದ್ರರು ತಪಸ್ಸು ಮಾಡಿರುವ ನರಸಿಂಹಸ್ವಾಮಿ ಗುಹೆ ನೋಡತಕ್ಕ ಸ್ಥಳಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.