ADVERTISEMENT

ಸಾದಲಿ ಹೊಸ ಕೆರೆಯಲ್ಲಿ ಹಕ್ಕಿಗಳ ಕಲರವ

ಗ್ರೇ ಹೆರಾನ್‌ ಹಕ್ಕಿಗಳು, ಸ್ಟಿಲ್ಟ್, ಪ್ಲೋವರ್, ಸ್ನೈಪ್, ಸ್ಯಾಂಡ್‌ಪೈಪರ್ ಮೋಜಿನಾಟ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 4:47 IST
Last Updated 18 ಜನವರಿ 2017, 4:47 IST
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆಯಲ್ಲಿ ಕಂಡು ಬಂದ ಗ್ರೇ ಹೆರಾನ್‌ ಹಕ್ಕಿ
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆಯಲ್ಲಿ ಕಂಡು ಬಂದ ಗ್ರೇ ಹೆರಾನ್‌ ಹಕ್ಕಿ   

ಶಿಡ್ಲಘಟ್ಟ: ಚಳಿಗಾಲದಲ್ಲಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ದೇಶೀಯ ಹಾಗೂ ವಿದೇಶೀ ನೀರ ಹಕ್ಕಿಗಳು ವಲಸೆ ಬರುತ್ತವೆ. ಆದರೆ ಈ ಬಾರಿ ನಗರದ ಅಮ್ಮನ ಕೆರೆ ಸೇರಿದಂತೆ ಹಲವು ಕೆರೆಗಳು ಬತ್ತಿವೆ. ಆದ್ದರಿಂದ ನೀರ ಹಕ್ಕಿಗಳು ಕಾಣಸಿಗುತ್ತಿಲ್ಲ. ಆದರೆ ಅಲ್ಪ ಸ್ವಲ್ವ ನೀರು ಹೊಂದಿರುವ ಸಾದಲಿ ಹೊಸ ಕೆರೆಯಲ್ಲಿ ಹಲವು ನೀರ ಹಕ್ಕಿಗಳನ್ನು ಕಾಣಬಹುದು.

ಕೆರೆಯಲ್ಲಿ ನೀರು ಕಡಿಮೆ ಇರುವುದರಿಂದ ಸಣ್ಣ, ದೊಡ್ಡ ಗಾತ್ರದ ನೀರು ಹಕ್ಕಿಗಳು  ಮೀನು, ಏಡಿ, ಕಪ್ಪೆ, ಶಂಖದ ಹುಳುಗಳನ್ನು ಬೆನ್ನು ಗೂನು ಮಾಡಿಕೊಂಡು ತಾಳ್ಮೆಯಿಂದ ಕಾದು ಲಬಕ್ಕನೆ ಹಿಡಿದು ತಿನ್ನುತ್ತಿವೆ. ಈ ಚಿತ್ರಗಳು ಆಕರ್ಷಕ. 

ಗ್ರೇ ಹೆರಾನ್‌ ಹಕ್ಕಿಗಳು, ಸ್ಟಿಲ್ಟ್, ಪ್ಲೋವರ್, ಸ್ನೈಪ್, ಸ್ಯಾಂಡ್‌ಪೈಪರ್ ಹಕ್ಕಿಗಳ ಜೊತೆಗೆ  ಬಾತು ಕೋಳಿ, ಬೆಳ್ಳಕ್ಕಿ ಮತ್ತು ಕೊಕ್ಕರೆಗಳ ಗುಂಪು ಸೇರಿಕೊಂಡು ಕೆರೆಯು ಪುಟ್ಟ ರಂಗನತಿಟ್ಟಿನಂತೆ ಕಾಣುತ್ತಿದೆ.

ದೊಡ್ಡ ಗಾತ್ರದ ಹಳದಿಕೆಂಪು ಬಣ್ಣದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳ ಹಿಂಡು ಕೆರೆಯಲ್ಲಿ ಕಂಡು ಬಂದಿದ್ದವು. ಆದರೆ ಒಂದು ದಿನವಷ್ಟೇ ಇಲ್ಲಿದ್ದ ಅವು ನಂತರ ಕಾಣಲಿಲ್ಲ.  ಬಹುಶಃ ಕೆರೆಯಲ್ಲಿ ಹಕ್ಕಿಗಳಿಗೆ ಆಹಾರ ಸಾಲದಾಗಿರಬೇಕು ಅಥವಾ ಮನುಷ್ಯರ ಓಡಾಟದಿಂದ ಬೇರೆಡೆ ಸ್ಥಳಾಂತರ ಗೊಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.