ADVERTISEMENT

ಸಾಲಮನ್ನಾಗೆ ಆಗ್ರಹಿಸಿ ರೈತಸಂಘ ಧರಣಿ

ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ; ವಿಶೇಷ ಪ್ಯಾಕೇಜ್ ರೂಪಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:20 IST
Last Updated 18 ಏಪ್ರಿಲ್ 2017, 6:20 IST
ಸಾಲಮನ್ನಾಗೆ ಆಗ್ರಹಿಸಿ ರೈತಸಂಘ ಧರಣಿ
ಸಾಲಮನ್ನಾಗೆ ಆಗ್ರಹಿಸಿ ರೈತಸಂಘ ಧರಣಿ   
ಚಿಕ್ಕಬಳ್ಳಾಪುರ: ‘ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಕೂಡಲೇ ಸರ್ಕಾರ ಎಲ್ಲಾ ಬಗೆಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.
 
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ‘ಬರಗಾಲದ ನಡುವೆಯೂ ರೈತರು ಅಲ್ಪಸ್ವಲ್ಪ ಲಭ್ಯವಿರುವ ನೀರಿನಲ್ಲಿ ದ್ರಾಕ್ಷಿ, ಹೂವು, ತರಕಾರಿ ಬೆಳೆದರೂ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.   ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು. 
 
‘ಈ ಹಿಂದೆ ಸಾಲ ಮನ್ನಾ ಮಾಡು ತ್ತೇವೆ ಎಂದು ಭರವಸೆ ನೀಡಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೇ ಮಾತು ತಪ್ಪಿದ್ದಾರೆ. ಇನ್ನಾದರೂ ಅವರು ತಮ್ಮ ಮಾತು ಉಳಿಸಿಕೊಳ್ಳಬೇಕು’ ಎಂದರು. 
 
ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಮಾಂಜಿನಪ್ಪ ಮಾತನಾಡಿ, ‘ಬೆಳೆ ನಾಶದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹ 20 ಸಾವಿರ ನಷ್ಟ ಪರಿಹಾರ ನೀಡಬೇಕು. ಮುಂಬರುವ ಮುಂಗಾರಿನಲ್ಲಿ ಸರ್ಕಾರವೇ ರೈತರಿಗೆ ಬೀಜ, ಗೊಬ್ಬರ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಬೇಕು’ ಎಂದು ಒತ್ತಾಯಿಸಿದರು. 
 
‘ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರು ಅಳವಡಿ ಸಿಕೊಂಡಿರುವ ನೆರಳು ಪರದೆ, ಪಾಲಿ ಹೌಸ್‌ಗಳಿಗೆ ನೀಡಬೇಕಿರುವ ಸಹಾಯ ಧನ ಕೂಡಲೇ ಬಿಡುಗಡೆ ಮಾಡಬೇಕು. ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು  ಭರ್ತಿ ಮಾಡಬೇಕು. ದಿನಕ್ಕೆ ಹತ್ತು ಗಂಟೆ ತ್ರೀಫೇಸ್ ವಿದ್ಯುತ್ ನೀಡಬೇಕು’ ಎಂದು ಆಗ್ರಹಿಸಿದರು.
 
ನಂದಿ ಹೋಬಳಿ ಅಧ್ಯಕ್ಷ ಗಂಗಾಧರ್, ‘ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ರೈತರಿಗೆ ಬರಗಾಲ ದೂರವಾಗುವವರೆಗೂ ಸರ್ಕಾರವೇ ಉಚಿತವಾಗಿ ಪಡಿತರ ನೀಡಬೇಕು. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ವಿಶೇಷ ಪ್ಯಾಕೇಜ್ ರೂಪಿಸಬೇಕು.
 
ಕಳೆದ ವರ್ಷ ಬರ ಪರಿಹಾರ ವಿತರಣೆಯಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು. ರೈತ ಸಂಘದ ಪದಾಧಿಕಾರಿಗಳಾದ ಕುಪ್ಪಹಳ್ಳಿ ಶ್ರೀನಿವಾಸ್, ವೆಂಕಟೇಶಪ್ಪ, ಜಿ.ಎನ್.ರಾಮಕೃಷ್ಣ ಭಾಗವಹಿಸಿದ್ದರು.
 
ಬೈಕ್ ರ್‍ಯಾಲಿ  
ಶಿಡ್ಲಘಟ್ಟ: ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಸಿ ಗ್ರೇಡ್‌–2 ತಹಶೀಲ್ದಾರ್ ಮುನಿಕೃಷ್ಣಪ್ಪ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
 
‘ಬಯಲು ಸೀಮೆ ರೈತರು ಸತತವಾಗಿ ಬರಗಾಲದಿಂದ ಕಂಗೆಟ್ಟಿದ್ದಾರೆ. ಬ್ಯಾಂಕ್‌ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಸಾಲ ಮಾಡಿ   ಕೊಳವೆ ಬಾವಿಗಳನ್ನು ಕೊರೆಸಿ ಸಾಲಗಾರರಾಗಿದ್ದಾರೆ. ರೈತರು ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಸಾಲ ಮನ್ನಾ ಮಾಡಬೇಕು’ ಎಂದು ರೈತರು ಆಗ್ರಹಿಸಿದರು. 
 
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ವೀರಾಪುರ ಮನಿನಂಜನಪ್ಪ, ಮಳ ಮಾಚನಹಳ್ಳಿ ದೇವರಾಜ್‌, ಈರಣ್ಣ, ತಮ್ಮಣ್ಣ, ನಾರಾಯಣಸ್ವಾಮಿ, ಸುಬ್ರ ಮಣಿ, ರಮೇಶ್‌, ಮುನಿರಾಜು, ರಾಮಕೃಷ್ಣಪ್ಪ ಇದ್ದರು.
****
ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ
ಗೌರಿಬಿದನೂರು:
ತಾಲ್ಲೂಕಿನ ರಮಾಪುರ ಗ್ರಾಮದ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ ರೈತರ ಬರಪರಿಹಾರದ ಹಣ, ಹಾಲು ಉತ್ಪಾದಕರಿಗೆ ನೀಡಿರುವ ಹಣ ಹಾಗೂ ವೃದ್ಧಾಪ್ಯ ವೇತನದ ಹಣವನ್ನು ಸಾಲಕ್ಕೆ ಮುರಿದುಕೊಳ್ಳುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬ್ಯಾಂಕ್ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ಲಕ್ಷ್ಮಿನಾರಾಯಣ ಮಾತನಾಡಿ, ‘ಮಳೆ ಬೆಳೆ ಇಲ್ಲದೆ ತತ್ತರಿಸುತ್ತಿರುವ ಸಂದರ್ಭದಲ್ಲಿ ರೈತರ ಜೀವನಕ್ಕೆ ಉಪಯೋಗವಾಗಲಿ ಎಂದು ಸರ್ಕಾರ ಬರಪರಿಹಾರ ನೀಡಿದರೆ ಬ್ಯಾಂಕ್ ನವರು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೀವನ ನಡೆಸುವುದ ಹೇಗೆ’ ಎಂದು ಪ್ರಶ್ನಿಸಿದರು.

‘ಗ್ರಾಮೀಣ ರೈತರು ಜೀವನ ನಿರ್ವಹಣೆ ಮಾಡುತ್ತಿರುವುದು ಹಾಲು ಉತ್ಪಾದನೆಯಿಂದ. ಈ ಹಣದಲ್ಲಿ ಬದುಕನ್ನು ಸಾಗಿಸಬೇಕು. ಅನೇಕರು ವೃದ್ಧಾಪ್ಯ ವೇತನದಲ್ಲಿಯೇ ಜೀವನ ನಡೆಸಬೇಕಾಗಿದೆ’ ಎಂದರು.

‘ಪಾಸ್‌ಪುಸ್ತಕಗಳಲ್ಲಿ ಹಣದ ಜಮೆಯನ್ನು ತಿಂಗಳು ಕಳೆದರೂ ನಮೂದಿಸಿಲ್ಲ. ಪಾಸ್ ಪುಸ್ತಕದಲ್ಲಿ ಎಷ್ಟು ಉಳಿಕೆ ಹಣವಿದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು’ ಎಂದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಗೌಡ, ಕಾರ್ಯದರ್ಶಿ ಸನತ್ ಕುಮಾರ್, ಪುಟ್ಟಣ್ಣ, ಜಯಣ್ಣ, ರಾಜಣ್ಣ, ಪದ್ಮನಾಭ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.