ADVERTISEMENT

ಸಾಲ ನೀಡದ ಬ್ಯಾಂಕ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 6:09 IST
Last Updated 2 ಸೆಪ್ಟೆಂಬರ್ 2014, 6:09 IST

ಶಿಡ್ಲಘಟ್ಟ: ರೈತರು ಸಕಾಲದಲ್ಲಿ ಸಾಲ ಪಾವತಿಸಿದ್ದರೂ ಮರು ಸಾಲ ನೀಡುತ್ತಿಲ್ಲ ಎಂದು ಆರೋಪಿಸಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಮುಂಭಾಗ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ನಲ್ಲಿ 2012ರಲ್ಲಿ ಪಡೆದಿದ್ದ ಸಾಲವನ್ನು ರೈತರು ಸಕಾಲದಲ್ಲಿ ಪಾವತಿಸಿದ್ದಾರೆ. ಅದಕ್ಕೆ ದಾಖಲೆಯಾಗಿ ರಶೀದಿಗಳು ಸಹ ಇವೆ. ಬ್ಯಾಂಕ್‌ನಲ್ಲಿ ಸರಿಯಾಗಿ ದಾಖ­ಲಾತಿ ಇಟ್ಟುಕೊಳ್ಳದೆ ಹಣ ಕಟ್ಟಿಲ್ಲ ಎನ್ನುತ್ತಿದ್ದಾರೆ ಎಂದು ಪ್ರತಿಭಟನಾ­ನಿರತರು ಆರೋಪಿಸಿದರು.

ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರಕ್ಕೆ ರೈತರನ್ನು ಹೊಣೆ ಮಾಡುತ್ತಿದ್ದಾರೆ. ಸಹ­ಕಾರ ಬ್ಯಾಂಕ್‌ನ ಬೇಜವಾಬ್ದಾರಿಯಿಂದ ಸರ್ಕಾರದಿಂದ ಬರಬೇಕಾಗಿದ್ದ ₨ 25 ಸಾವಿರ ಸಹಾಯಧನ ರೈತರಿಗೆ ಸಿಗ­ದಂತಾಗಿದೆ. ಸರ್ಕಾರ ಮನ್ನಾ ಮಾಡಿದ ಹಣವನ್ನೂ ಕಟ್ಟುವಂತೆ ರೈತರಿಗೆ ಬ್ಯಾಂಕ್‌­­ನವರು ನೋಟಿಸ್‌ ನೀಡಿದ್ದಾರೆ. ಬರಗಾಲದ ಈಗಿನ ಪರಿಸ್ಥಿತಿಯಲ್ಲಿ ರೈತರಿಗೆ ಸಾಲ ಕೂಡ ನೀಡದಿರುವುದು ದುರದೃಷ್ಟಕರ.
ಸಾಲ ವಾಪಸ್‌ ಮಾಡಿದ ರೈತರಿಗೆ ಕ್ಲಿಯರೆನ್ಸ್‌ ಸರ್ಟಿ­ಫಿಕೇಟ್‌ ಕೊಡಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿದ ರೈತರಿಗೂ ಮರು ಸಾಲ ನೀಡಬೇಕು ಎಂಬ ಬೇಡಿಕೆ­ಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೈತ ಸಂಘದ ಜಿಲ್ಲಾ  ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿ­ದ್ದಾರೆ.

ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಮತ್ತು ಸಹಕಾರ ಬ್ಯಾಂಕ್‌ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಸಹಕಾರ ಬ್ಯಾಂಕ್‌ಗೆ ಕಟ್ಟಿರುವ ಹಣದ ಲೆಕ್ಕವಿದೆ. ಯಾವುದೇ ಅವ್ಯವಹಾರ ನಡೆದಿಲ್ಲ. ₨ 50 ಸಾವಿರ ಸಾಲ ಪಡೆದ ರೈತರು ₨ 25 ಸಾವಿರ ಕಟ್ಟಿದ್ದಾರೆ. ಕಳೆದ ವರ್ಷ ಸರ್ಕಾರ ಸಾಲ ಮನ್ನಾ ಮಾಡಿದ ಸಂದರ್ಭ­ದಲ್ಲಿ ಅವರು ಹಣ ಕಟ್ಟಿರು­ವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕಾರಿ ಮಂಡಳಿ ಸಭೆ­ಯಲ್ಲಿ ಚರ್ಚಿಸಿ ಪರಿಶೀಲಿಸಲಾಗುವುದು ಎಂದರು.

ಬಾಕಿ ಹಣವನ್ನು ಕಟ್ಟಬೇಕು ಎಂದು ಈಗಾಗಲೇ ರೈತರಿಗೆ ನೋಟಿಸ್‌ ನೀಡಿದ್ದೇವೆ. ಈಗಿನ ಸರ್ಕಾರ ಬಡ್ಡಿರಹಿತ ಸಾಲ ನೀಡುವುದರಿಂದ, ನೀವು ಬಾಕಿ ಹಣ ಕಟ್ಟಿ. ಅದರಿಂದ ನಾವು ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಹಣ ತರಲು ಸಾಧ್ಯ ಎಂದು ಹೇಳಿದ್ದೇವೆ. ಸಹಕಾರಿ ಬ್ಯಾಂಕ್‌ ಉಳಿಸಿ, ಬೆಳೆಸುವ ಕರ್ತವ್ಯ ರೈತರು ಸೇರಿದಂತೆ ನಮ್ಮೆಲ್ಲರದೂ ಇದೆ. ರೈತರ ಮನವೊಲಿಸುತ್ತೇವೆ ಎಂದು ಅವರು ಹೇಳಿದರು.

ರೈತಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್‌, ಮಳಮಾಚನಹಳ್ಳಿ ದೇವ­ರಾಜ್‌, ಚನ್ನರಾಯಪ್ಪ, ಮುನಿ­ನಂಜಪ್ಪ, ಕೃಷ್ಣಪ್ಪ, ಅಬ್ಲೂಡು ಆರ್‌.­ದೇವರಾಜ್‌ ಮತ್ತಿತರರು ಭಾಗವಹಿ­ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.