ADVERTISEMENT

ಸಿಗದ ನೀರು, ವಲಸೆ ಹೊರಟ ರೈತರು

ಗೌರಿಬಿದನೂರು ತಾಲ್ಲೂಕಿನಲ್ಲಿ ಕೊನೆಗಾಣದ ಸಮಸ್ಯೆ: ಮಳೆ ನೀರೀಕ್ಷೆಯಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:26 IST
Last Updated 3 ಸೆಪ್ಟೆಂಬರ್ 2015, 11:26 IST

ಗೌರಿಬಿದನೂರು: ‘ತಾಲ್ಲೂಕಿಗೆ ಯಾರ ಶಾಪ ತಟ್ಟಿದೆಯೋ ಗೊತ್ತಿಲ್ಲ. ಕಳೆದ 11 ವರ್ಷಗಳಿಂದ ಮಳೆಯನ್ನು ನಂಬಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನೀರಿಗೆ ಆಧಾರವಾಗಬೇಕಿದ್ದ ಕೊಳವೆಬಾವಿಗಳು ಕೂಡ ಒಂದೊಂದಾಗಿ ಬತ್ತುತ್ತಿದ್ದು, ಬದುಕು ಇನ್ನಷ್ಟು ಕಷ್ಟವಾಗಿದೆ. ಕೆಲವರಂತೂ ಜಮೀನು ಮಾರಾಟ ಮಾಡಿ, ಬೆಂಗಳೂರು ಅಥವಾ ಹೈದರಾಬಾದ್‌ಗೆ ವಲಸೆ ಹೋಗುತ್ತಿದ್ದಾರೆ’.

ತಾಲ್ಲೂಕಿನ ನಗರಗೆರೆ ಹೋಬಳಿ ಗುಂಡ್ಲುಕೊತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ಹರೀಶ್‌ ಅವರ ನೊಂದ ಮಾತುಗಳಿವು. ತಾಲ್ಲೂಕು ಕೇಂದ್ರ ಗೌರಿಬಿದನೂರಿನಿಂದ 20 ಕಿ.ಮೀ.ಗಳಷ್ಟು ದೂರದಲ್ಲಿರುವ ಈ ಗಡಿ ಹೋಬಳಿಯಲ್ಲಿ ಬಹುತೇಕ ಗ್ರಾಮಗಳ ಜನರು ಹರೀಶ್ ಅವರಂತೆಯೇ ಮಾತನಾಡುತ್ತಾರೆ. ಮಳೆಯಿಲ್ಲದೇ ಕೃಷಿ ಕೆಲಸ ಕಷ್ಟ ಎಂಬ ಸ್ಥಿತಿಗೆ ತಲುಪಿದ್ದಾರೆ.

ಸಿಗದು ಕುಡಿಯಲು ನೀರು: ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಕೊಳವೆಬಾವಿ ದೀರ್ಘ ಕಾಲದವರೆಗೆ ಬಾಳಿಕೆಗೆ ಬಾರದಿರುವುದು ಈ ಭಾಗದ ರೈತರಿಗೆ ಒಂದೆಡೆ ತೀವ್ರವಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಹೆಚ್ಚು ನೀರು ಬಳಕೆ ಮಾಡದೇ ಕೃಷಿ ಕೆಲಸ ಕೈಗೊಳ್ಳುವುದು ಹೇಗೆ ಎಂಬ ಸವಾಲು ಎದುರಾಗಿದೆ.

ಮುದಲೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾದರ್ಲಹಳ್ಳಿ, ಮೇಳ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸೇನಹಳ್ಳಿ, ನಗರಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಲಘಟ್ಟ ತಾಂಡಾ, ಬಂಡ್‌ಮಿಲ್‌ ತಾಂಡಾ, ನಡಮಿತಾಂಡಾ ಮುಂತಾದ ಕಡೆ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮಸ್ಥರ ಬದುಕುಕಷ್ಟವಾಗಿದೆ.

ಮುಂಗಾರಿಗೂ ಮುನ್ನ ಉತ್ತಮ ಮಳೆಯಾದಾಗ, ಕೃಷಿ ಚಟುವಟಿಕೆಗೆ ಎಲ್ಲ ಸಿದ್ಧತೆ ಮಾಡಿಕೊಂಡೆವು. ಆದರೆ ನಂತರದ ದಿನಗಳಲ್ಲಿ ತುಂತುರು ಮಳೆಯಾಯಿತೇ ಹೊರತು ಕೃಷಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗಲಿಲ್ಲ. ಇದರ ಮಧ್ಯೆ ಆಗಾಗ್ಗೆ ಸ್ವಲ್ಪ ಹದವಾಗಿ ಮಳೆಯಾದಾಗ, ಕೆಲ ರೈತರು ಉಳುಮೆ ಮತ್ತು ಬೀಜ ಬಿತ್ತನೆ ಕೈಗೊಂಡರು. ಆದರೆ ಮಳೆಯಾಗದೇ ಜಮೀನು ತೇವಾಂಶ ಕಳೆದುಕೊಂಡಿತು ಎಂದು ತಾಲ್ಲೂಕಿನ ಶಂಭುಕನಗರದ ರೈತ ಗಂಗಾಧರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆ ಪರಿಹರಿಸಬೇಕು: ಕೃಷಿ ಕೆಲಸದಿಂದ ಬೇಸತ್ತಿರುವ ಕೆಲ ರೈತರು ಜಮೀನು ಮಾರಾಟ ಮಾಡಿ, ನಗರ ಮತ್ತು ಪಟ್ಟಣ ಸೇರಿಕೊಂಡಿದ್ದಾರೆ. ಕೆಲವರು ಆಂಧ್ರಪ್ರದೇಶದ ಗಡಿಭಾಗದ ಕಾರ್ಖಾನೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ರೈತರ ಬದುಕು ಇನ್ನಷ್ಟು ದಯನೀಯವಾಗಿದೆ ಎಂದರು.

ಒಂದೆರಡು ವಾರಗಳ ಅವಧಿಯಲ್ಲಿ ಮಳೆ ಬಾರದಿದ್ದರೆ, ಭವಿಷ್ಯದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗಲಿದೆ. ಕೆಲ ಗ್ರಾಮಗಳಲ್ಲಿ ಮೇವಿನ ಕೊರತೆ ಸಹ ತಲೆದೋರಿದ್ದು ಜಾನುವಾರುಗಳ ಸಾಕಣೆಯೂ ಕಷ್ಟಕರವಾಗಿ ಪರಿಣಮಿಸಿದೆ. ಬರ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಕೃಷಿ ಚಟುವಟಿಕೆ ಕೈಗೊಳ್ಳುವಷ್ಟು ಚೈತನ್ಯವನ್ನು ರೈತರಲ್ಲಿ ತುಂಬಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಆರ್.ರವಿಚಂದ್ರರೆಡ್ಡಿ ತಿಳಿಸಿದರು.

ಬಿತ್ತನೆಯಲ್ಲಿ ತೀವ್ರ ಹಿನ್ನಡೆ
ತಾಲ್ಲೂಕಿನಲ್ಲಿ ಪ್ರತಿ ವರ್ಷವೂ ವಾಡಿಕೆ 679.3 ಮಿ.ಮೀ. ಮಳೆ ಆಗಬೇಕಿತ್ತು. ಕಳೆದ ವರ್ಷ 571.6 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಆಗಸ್ಟ್‌ ಅಂತ್ಯದ ವೇಳೆಗೆ ಕೊಂಚ ಉತ್ತಮ ಮಳೆಯಾಗಿದ್ದರೂ ಕೃಷಿ ಚಟುವಟಿಕೆಗೆ ಹೆಚ್ಚು ಪ್ರಯೋಜನವಾಗಿಲ್ಲ. ಬಹುತೇಕ ಮಳೆ ಮುಂಗಾರಿಗಿಂತ ಮುಂಚೆ ಸುರದಿದ್ದು, ರೈತರಿಗೆ ಹೆಚ್ಚು ಉಪಯುಕ್ತವಾಗಿಲ್ಲ.

ತಾಲ್ಲೂಕಿನಲ್ಲಿ 3404 ಹೆಕ್ಟೇರ್‌ ಪೈಕಿ 2525 ಹೆಕ್ಟೇರ್‌ ಜಮೀನಿನಲ್ಲಿ ಮಾತ್ರ ರಾಗಿ ಬಿತ್ತನೆಯಾಗಿದ್ದು, 24400 ಹೆಕ್ಟೇರ್‌ ಪೈಕಿ 22675 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯಾಗಿದೆ. ತೊಗರಿ 1650 ಹೆಕ್ಟೇರ್‌ ಪೈಕಿ 1000 ಹೆಕ್ಟೇರ್‌ ಜಮೀನಿನಲ್ಲಿ ಮಾತ್ರ ಬಿತ್ತನೆಯಾಗಿದ್ದು, ನೆಲಗಡಲೆ ಬಿತ್ತನೆಯಲ್ಲಿ ತೀವ್ರ ಹಿನ್ನಡೆಯಾಗಿದೆ. 5500 ಪೈಕಿ 1025 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆ ಬೆಳೆಗಳನ್ನು ಲೆಕ್ಕ ಹಾಕಿದರೆ, 37049 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಳ್ಳಬೇಕಿತ್ತು. ಆದರೆ 30250 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.