ADVERTISEMENT

ಸುಗಮ ಸಂಚಾರ ಇಲ್ಲೀಗ ಕಷ್ಟಕರ..

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 10:28 IST
Last Updated 28 ಜುಲೈ 2014, 10:28 IST
ಚಿಕ್ಕಬಳ್ಳಾಪುರದ ಎಚ್ಎಸ್‌ ಗಾರ್ಡನ್‌ ಬಡಾವಣೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಅಂಡರ್‌ಪಾಸ್‌ ಕೆಳಗಡೆ ನೀರು ನಿಂತಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ.
ಚಿಕ್ಕಬಳ್ಳಾಪುರದ ಎಚ್ಎಸ್‌ ಗಾರ್ಡನ್‌ ಬಡಾವಣೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಅಂಡರ್‌ಪಾಸ್‌ ಕೆಳಗಡೆ ನೀರು ನಿಂತಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ.   

ಚಿಕ್ಕಬಳ್ಳಾಪುರ: ಇದನ್ನು ನಿರ್ಮಿಸಿದ್ದು ನಗರದ ನಿವಾಸಿಗಳ ಸಂಚಾರಕ್ಕೆ ಅನುಕೂಲವಾಗಲಿ ಎಂದು, ಆದರೆ ಇದನ್ನು ಯಾಕಾದರೂ ನಿರ್ಮಿಸಿ­ದರೂ ಎನ್ನು­­ವಷ್ಟರಮಟ್ಟಿಗೆ ಜನ ಪರಿತಪಿ­ಸುತ್ತಿ­ದ್ದಾರೆ. ಅಲ್ಪ ಮಳೆಗೂ ಇಲ್ಲಿ ಸಂಚಾರ ‘ನಿಷಿದ್ಧ’.

ನಗರದಲ್ಲೇ ಅತ್ಯಂತ ದೊಡ್ಡ ಬಡಾವಣೆಗಳಲ್ಲಿ ಒಂದಾಗಿರುವ ಎಚ್‌ಎಸ್‌ ಗಾರ್ಡನ್‌ (ಕೆಳಗಿನತೋಟ) ಬಡಾವಣೆಯ ನಿವಾಸಿಗಳು ನಿತ್ಯವು ಪರದಾಡುತ್ತಿದ್ದಾರೆ.

‘ಇಡೀ ನಗರದಲ್ಲೇ ಮೊಟ್ಟಮೊದಲ ಅಂಡರ್‌­­ಪಾಸ್‌ ನಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಪೂರ್ಣಗೊಂಡಿದೆ ಎಂಬ ಹೆಮ್ಮೆಯಿತ್ತು. ಆದರೆ ಈಗಿನ ಅಂಡರ್‌ಪಾಸ್‌ ಪರಿಸ್ಥಿತಿ ನೋಡಿದರೆ, ತುಂಬಾ ನೋವು ಮತ್ತು  ಬೇಸರವಾಗುತ್ತಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ­ಬೇಕಿದ್ದ ಅಂಡರ್‌ಪಾಸ್‌ ಈಗ ಹೊಂಡವಾಗಿ ಮಾರ್ಪಟ್ಟಿದೆ. ಅಲ್ಲಿಂದ ಓಡಾಡುವುದು, ಸಂಚರಿಸುವುದೇ ದುಸ್ತರವಾಗಿದೆ’ ಎಂದು ಹೇಳುತ್ತಾರೆ ಬಡಾವಣೆ ನಿವಾಸಿ ವೆಂಕಟೇಶ್‌.

ಹಿಂದಿನ ಹತ್ತು ವರ್ಷಗಳಲ್ಲಿ ಏನೆಲ್ಲಾ  ಬದಲಾವಣೆ ಮತ್ತು ಯಾವುದೆಲ್ಲಾ ಕಾಮಗಾರಿಗಳು ನಡೆದವು ಎಂಬುದರ ಬಗ್ಗೆ ಉದಾಹರಣೆ ಸಮೇತ ನೀಡುತ್ತಾರೆ. ಅಂಡರ್‌ಪಾಸ್‌ ನಿರ್ಮಾಣಗೊಂಡ ನಂತರ ಮತ್ತೆ ಯಾವ ರೀತಿಯ ಸಮಸ್ಯೆಗಳು ಸೃಷ್ಟಿಯಾದವು ಎಂದು ಬಿಚ್ಚಿಡುತ್ತಾರೆ.

ಅಂಡರ್‌ಪಾಸ್‌ ನಿರ್ಮಾಣಗೊಳ್ಳುವ ಮುಂಚೆ ಇಲ್ಲಿ ರೈಲ್ವೆ  ಗೇಟ್‌ ಇತ್ತು. ರೈಲು ಸಂಚಾರದ ವೇಳೆ ವಾಹನ ಸವಾರರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ರೈಲ್ವೆ ಇಲಾಖೆಯವರು ಅಂಡರ್‌ಪಾಸ್‌ ನಿರ್ಮಿಸಲು ಕ್ರಮ ಕೈಗೊಂಡರು. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿ  5 ವರ್ಷಗಳವರೆಗೂ ಯಾವ ಕೆಲಸಗಳು ಸಹ ನಡೆಯಲಿಲ್ಲ’ ಎನ್ನುತ್ತಾರೆ ಹಿರಿಯ ನಾಗರಿಕ ವೆಂಕಟಪ್ಪ.

ರೈಲು ನಿಲ್ದಾಣದ ನವೀಕರಣ ವೇಳೆ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅಂಡರ್‌ಪಾಸ್‌ ನಿರ್ಮಾಣದ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.  ಅಂಡರ್‌ಪಾಸ್‌ ಕೆಳಗಡೆ ನೀರು ನಿಲ್ಲದಂತೆ ಜಾಗೃತಿ ವಹಿಸಬಹುದಿತ್ತು ಆದರೆ ಯಾವುದೇ ರೀತಿ ಗಮನಹರಿಸಲಿಲ್ಲ. ಅವೈಜ್ಞಾನಿಕ ನಿರ್ಮಾಣ ಪದ್ಧತಿಯೇ ಇದಕ್ಕೆ ಕಾರಣ. ಸುಗಮ ಸಂಚಾರಕ್ಕಿಂತ ಸಮಸ್ಯೆಯೇ ಹೆಚ್ಚಾಗಿದೆ.

ಪ್ರತಿ ದಿನವೂ ಇಲ್ಲಿ ಸಾವಿರಾರು ವಾಹನಗಳು  ಸಂಚರಿಸುತ್ತವೆ. ಎಚ್‌ಎಸ್‌ ಗಾರ್ಡನ್‌ ಬಡಾವಣೆ ನಿವಾಸಿಗಳು ಅಲ್ಲದೇ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವವರು ಕೂಡ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ರಸ್ತೆಯುದ್ದಕ್ಕೂ ತೆಗ್ಗುದಿಣ್ಣೆಗಳಿದ್ದು, ಇಲ್ಲಿ ಸಂಚರಿಸಲು ಭಯವಾಗುತ್ತದೆ. ವಾಹನಗಳು ಬೇಗನೇ ಹಾಳಾಗುತ್ತವೆ ಅಲ್ಲದೇ ನಾವು ಅಪಘಾತಕ್ಕೀಡಾಗಿ ಗಾಯಗೊಳ್ಳುತ್ತೇವೆ’ ಎಂದು ವಾಹನ ಸವಾರ ಶ್ರೀಧರ್‌ ತಿಳಿಸಿದರು.

ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರಿದಾಗ ಶಾಸಕ ಡಾ. ಕೆ.ಸುಧಾಕರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪರಿಶೀಲನೆ ನಡೆಸಿದ ಮರುಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಇದೆಲ್ಲವೂ ನಡೆದು ತಿಂಗಳುಗಳೇ ನಡೆದರೂ ಯಾವುದೇ ರೀತಿಯ ದುರಸ್ತಿ ಕಾಮಗಾರಿ ನಡೆದಿಲ್ಲ. ನಿವಾಸಿಗಳಿಗೆ ತೊಂದರೆ ತಪ್ಪಿಲ್ಲ ಎನ್ನುವುದು ಸ್ಥಳೀಯರ ದೂರು.

ಅಂಡರ್‌ಪಾಸ್ ದುರಸ್ತಿ ಬಗ್ಗೆ ನಮಗೆ ಇದ್ದ ಸಹನೆ ಮೀರಿ ಹೋಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ, ನಮ್ಮಿಂದಾ ಸಹಿಸಲು ಆಗುವುದಿಲ್ಲ. ದುರಸ್ತಿ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳದಿದ್ದಲ್ಲಿ, ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.