ADVERTISEMENT

ಸುಣ್ಣ ನೀಡಿದರೆ ಇಳುವರಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 7:32 IST
Last Updated 14 ಜುಲೈ 2017, 7:32 IST

ಶಿಡ್ಲಘಟ್ಟ: ‘ಮಾವಿನ ಗಿಡ ಸವರುವಿಕೆಯ ಹಾಗೂ ಜುಲೈ, ಆಗಸ್ಟ್‌ನಲ್ಲಿ ಕೈಗೊಳ್ಳಬೇಕಾದ ಬೇಸಾಯ ಕ್ರಮಗಳ ಬಗ್ಗೆ ತಿಳಿವಳಿಕೆ ಹೊಂದಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ’ ಎಂದು ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.

ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದ ಲಕ್ಷ್ಮಿನಾರಾಯಣಪ್ಪ ಅವರ ತೋಟದಲ್ಲಿ ಗುರುವಾರ ಮಾವು ಪುನಶ್ಚೇತನ ಮತ್ತು ಸವರುವಿಕೆ ಕುರಿತು ನಡೆದ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು.

‘ತೋಟಗಾರಿಕಾ ಬೆಳೆಗಳಲ್ಲಿ ಮಾವು ಪ್ರಮುಖ ವಾಣಿಜ್ಯ ಬೆಳೆ.  ಮಾವು ಸುಣ್ಣ ಬಯಸುವ ಬೆಳೆಯಾಗಿದೆ. ನಮ್ಮ ಭಾಗದ ಮಣ್ಣಿನಲ್ಲಿ ಸುಣ್ಣದ ಕೊರತೆ ಇದೆ. ಸುಣ್ಣವು ಮಾವಿನ ಅಂಗಾಂಶಗಳ ಆರೋಗ್ಯಕ್ಕೆ ಅತಿ ಅವಶ್ಯಕ. ಆದ್ದರಿಂದ ಮಳೆಗಾಲದ ಆರಂಭದಲ್ಲಿ ಸುಣ್ಣ ನೀಡುವುದು ಸೂಕ್ತ’ ಎಂದು ಹೇಳಿದರು.

ADVERTISEMENT

‘ಸುಣ್ಣದ ಪುಡಿಯನ್ನು ಗಿಡದ ಪಾತಿಯಲ್ಲಿ ಸಮನಾಗಿ ಉದುರಿಸಿ  ಹಗುರವಾಗಿ ನೆಲ ಅಗೆಯಬೇಕು. ಮಳೆ ಬಂದಾಗ ಸುಣ್ಣ ಕರಗಿ ಬೇರಿಗೆ ಹೋಗುತ್ತದೆ’ ಎಂದು  ವಿವರಿಸಿದರು. ‘ಒತ್ತಾಗಿ ಬೆಳೆದ ರೆಂಬೆಗಳನ್ನು ಕತ್ತರಿಸಬೇಕು. ಸೂರ್ಯನ ಬೆಳಕು ಗಿಡಕ್ಕೆ ತಾಗುವುದರಿಂದ ಕಾಯಿ ಕಚ್ಚುತ್ತವೆ. ಇದರಿಂದ ಇಳುವರಿ ಹಾಗೂ ಹಣ್ಣಿನ ಗುಣಮಟ್ಟ ಹೆಚ್ಚಾಗುತ್ತದೆ’ ಎಂದರು.

‘ಮಾವಿನ ಬೆಳೆಗೆ ಹನಿ ನೀರಾವರಿ ಅಳವಡಿಸಿ ಕೊಳ್ಳುವುದು ಉತ್ತಮ. ಇದರಿಂದ ನೀರಿನ ಸದ್ಬಳಕೆ ಮತ್ತು ಕಾಯಿ ಉದುರುವುದು ಕಡಿಮೆ ಯಾಗುತ್ತದೆ’ ಎಂದು ಅವರು ವಿವರಿಸಿದರು.  ಗಿಡ ಸವರುವಿಕೆ ರೀತಿ, ಕೀಟಗಳ ನಿರ್ವಹಣೆ, ಬೇಸಾಯ ಕ್ರಮಗಳು, ತೋಟಗಳ ಪುನಶ್ಚೇತನ, ವಿಮೆ, ಹೊಸ ತೋಟಗಳ ಸ್ಥಾಪನೆಗೆ ಸರ್ಕಾರದಿಂದ ಸಿಗುವ ಸಹಾಯಧನ, ಹನಿ ನೀರಾವರಿ ವಿಷಯಗಳ ಬಗ್ಗೆ ವಿಜ್ಞಾನಿಗಳು ಮತ್ತು ಅಧಿಕಾರಿಗಳು ತಿಳಿಸಿದರು.

ತೋಟಗಾರಿಕಾ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಉಪನಿರ್ದೇಶಕಿ ಗಾಯತ್ರಿ, ಸಹಾಯಕ ನಿರ್ದೇಶಕ ಮುನೇಗೌಡ, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಚಂದ್ರೇಗೌಡ, ಆರ್‌.ಶ್ರೀನಿವಾಸ್‌, ರಾಮಯ್ಯ, ಸುರೇಶ್‌, ಚಿಕ್ಕಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.