ADVERTISEMENT

ಸ್ಥಾನ ಏರಿತು, ಫಲಿತಾಂಶ ಇಳಿಯಿತು

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ 13ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:28 IST
Last Updated 12 ಮೇ 2017, 9:28 IST
ಸ್ಥಾನ ಏರಿತು, ಫಲಿತಾಂಶ ಇಳಿಯಿತು
ಸ್ಥಾನ ಏರಿತು, ಫಲಿತಾಂಶ ಇಳಿಯಿತು   
ಚಿಕ್ಕಬಳ್ಳಾಪುರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆ ಶೇಕಡಾವಾರು 59.63 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದಿದೆ.
 
ಕಳೆದ ವರ್ಷ ಶೇ63.74ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ 14ನೇ ಸ್ಥಾನದಲ್ಲಿತ್ತು. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ ಈ ವರ್ಷ ಒಂದು ಸ್ಥಾನದಲ್ಲಿ ಏರಿಕೆಯಾಗಿದ್ದು, ಫಲಿತಾಂಶದಲ್ಲಿ ಶೇ 4.11ರಷ್ಟು ಇಳಿಮುಖವಾಗಿದೆ. 
 
ಗುರುವಾರ ಮಧ್ಯಾಹ್ನ 3.30 ರಿಂದ ವೆಬ್‌ಸೈಟ್‌ಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಾಗುತ್ತಿದ್ದಂತೆ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಸೈಬರ್‌ ಕೇಂದ್ರಗಳಿಗೆ ಭೇಟಿ ನೀಡಿ, ಫಲಿತಾಂಶ ನೋಡಲು ಧಾವಂತ ತೋರುತ್ತಿದ್ದ ದೃಶ್ಯಗಳು ಗೋಚರಿಸಿದವು. ಇನ್ನು ಬಹುಪಾಲು ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಸ್ಮಾರ್ಟ್‌ಪೋನ್‌ಗಳಲ್ಲಿಯೇ ತಮ್ಮ ‘ಭವಿಷ್ಯ’ ತಿಳಿದುಕೊಂಡರು. 
 
ಪದವಿ ಪೂರ್ಣ ಶಿಕ್ಷಣ ಇಲಾಖೆ ಕಡೆಯಿಂದ ಗುರುವಾರ ಜಿಲ್ಲೆಯ ಸಂಪೂರ್ಣ ಫಲಿತಾಂಶದ ವಿವರ ಲಭ್ಯವಾಗಲಿಲ್ಲ. ಶುಕ್ರವಾರ ಸಂಜೆ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. 
 
ಜಿಲ್ಲೆಯಲ್ಲಿ 21 ಸರ್ಕಾರಿ, 10 ಅನುದಾನಿತ, 70 ಅನುದಾನ ರಹಿತ ಪಿಯು ಕಾಲೇಜುಗಳಿವೆ. ಈ ಪೈಕಿ ವಿವಿಧ ವಿಭಾಗಗಳಿಂದ 12,698 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿ ಕೊಂಡಿದ್ದರು. ಇವರೊಂದಿಗೆ 2,408 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದರೆ, 334 ಅಭ್ಯರ್ಥಿಗಳು ಖಾಸಗಿಯಾಗಿ ಪರೀಕ್ಷೆ ಎದುರಿಸಿದ್ದರು. ಈ ಬಾರಿ ಒಟ್ಟು 15,440 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. 
 
ಮರು ಎಣಿಕೆ ಮೇ 25 ಕೊನೆ
ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24 ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 25 ಕೊನೆ ದಿನಗಳಾಗಿವೆ. ಪ್ರತಿ ವಿಷಯ ಮರು ಮೌಲ್ಯಮಾಪನ ಮಾಡಲು ₹1,260 ಶುಲ್ಕ ನಿಗದಿಪಡಿ ಸಲಾಗಿದೆ.  ಮರು ಎಣಿಕೆಗೆ ಯಾವುದೇ ಶುಲ್ಕ ಇಲ್ಲ. ಈ ಎರಡು ಪ್ರಕ್ರಿಯೆಗಳ ಫಲಿತಾಂಶ ಆಯಾ ದಿನವೇ www.pue.kar.nic.in ಜಾಲತಾಣದಲ್ಲಿ ಪ್ರಕಟವಾಗಲಿದೆ. 
 
ಜೂನ್‌ 28ರಿಂದ ಪೂರಕ ಪರೀಕ್ಷೆ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ 28ರಿಂದ ಜುಲೈ 8ರ ವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಿಗೆ ಶುಲ್ಕ ಪಾವತಿಸಲು ಜೂನ್‌ 23 ಕೊನೆಯ ದಿನವಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್‌ ಪ್ರತಿಗಾಗಿ ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನವಾಗಿದ್ದು, ಪ್ರತಿ ವಿಷಯಕ್ಕೆ ₹400 ಶುಲ್ಕ ನಿಗದಿಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.